ಮುಂಬೈ: ಅಪಹರಿಸಿ ಕೊಲೆ ಮಾಡಲೆತ್ನಿಸಿದ 15 ಸೊಮಾಲಿ ಕಡಲ್ಗಳ್ಳರಿಗೆ ಮುಂಬೈ ನ್ಯಾಯಾಲಯ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
ಅರೇಬಿಯನ್ ಸಮುದ್ರದ ಭಾರತೀಯ ಪ್ರದೇಶದಲ್ಲಿ ಉಡಾವಣಾ ರಾಕೆಟ್ ಮತ್ತು ಎಕೆ 47 ಗನ್ ಗಳೊಂದಿಗೆ ಈ ಸೊಮಾಲಿ ಕಡಲ್ಗಳ್ಳರು 2011ರಲ್ಲಿ ಬಂಧಿಸಲ್ಪಟ್ಟಿದ್ದರು.ಆರಂಭದಲ್ಲಿ ಅವರ ವಿರುದ್ಧ ಕೊಲೆ ಆರೋಪ ಕೇಳಿಬಂದಿತ್ತು. ಆದರೆ ಥೈಲ್ಯಾಂಡ್ ನಿಂದ ಸಾಕ್ಷಿದಾರರು ನ್ಯಾಯಾಲಯಕ್ಕೆ ಬಂದು ಹೇಳಿಕೆ ನೀಡದ್ದರಿಂದ ಅವರ ವಿರುದ್ಧ ಕರಾವಳಿ ಪಡೆ ಅಧಿಕಾರಿಗಳ ಹೇಳಿಕೆ ಪ್ರಕಾರ ಕೊಲೆ ಯತ್ನ ಆರೋಪ ದಾಖಲಾಗಿದೆ.
ಈ ಆಪಾದಿತರು ಈಗಾಗಲೇ 6 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಇನ್ನೊಂದು ವರ್ಷದಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. ನ್ಯಾಯಾಲಯ ಅವರಿಗೆ ದಂಡ ಕೂಡ ವಿಧಿಸಿದೆ.
ಈ ಮಧ್ಯೆ ರಕ್ಷಣಾ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿ ಭಾರತ ಸರ್ಕಾರ ಮತ್ತು ಸೊಮಾಲಿಯಾ ಸರ್ಕಾರಗಳ ಮಧ್ಯೆ ಒಪ್ಪಂದವೇರ್ಪಟ್ಟಿದ್ದು ಅದರಂತೆ ಈ ಅಪರಾಧಿಗಳನ್ನು ಸೊಮಾಲಿಯಾಕ್ಕೆ ಮತ್ತೆ ಕಳುಹಿಸಬಹುದಾಗಿದೆ ಅಲ್ಲಿ ಅವರು ತಮ್ಮ ಜೈಲು ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಬಹುದು.
2011ರಲ್ಲಿ ಜನವರಿಯಿಂದ ಮಾರ್ಚ್ ವರೆಗೆ ಸುಮಾರು 200 ಸೊಮಾಲಿ ಕಡಲ್ಗಳ್ಳರು ಬಂಧಿಸಲ್ಪಟ್ಟಿದ್ದರು.