ದೆಹಲಿ ಬಳಿಕ ಉತ್ತರಾಖಂಡ್ ಸರದಿ: ಮಹಿಳೆಯ ಜಡೆ ಕತ್ತರಿಸಿದ ದುಷ್ಕರ್ಮಿಗಳು, ಹೆಚ್ಚಿದ ಆತಂಕ
ಉಧಮ್ ಸಿಂಗ್ ನಗರ: ನಿಗೂಢವಾಗಿ ಜಡೆ ಕತ್ತರಿಸುತ್ತಿರುವ ಘಟನೆಗಳು ರಾಜಧಾನಿ ದೆಹಲಿಯ ಮಹಿಳೆಯರನ್ನು ಆತಂಕಕ್ಕೀಡಾಗುವಂತೆ ಮಾಡಿದೆ, ಇದೀಗ ಇಂತಹದ್ದೇ ಘಟನೆ ಉತ್ತರಾಖಂಡ್ ನಲ್ಲೂ ನಡೆದಿರುವುದಾಗಿ ಸೋಮವಾರ ವರದಿಗಳಾಗಿವೆ.
ಉಧಮ್ ಸಿಂಗ್ ನಗರದ ಕಿಚ್ಚಾ ಪ್ರದೇಶದಲ್ಲಿ ನಿವಾಸಿಯಾಗಿರುವ ಶ್ಯಾಮಾ ದೇವಿ ಎಂಬ ಮಹಿಳೆಯೊಬ್ಬರ ಜಡೆಯನ್ನು ನಿಗೂಢವಾಗಿ ಕತ್ತರಿಸಲಾಗಿದೆ. ಘಟನೆಯಿಂದಾಗಿ ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.
ಹೆಚ್ಚಿನ ಮಹಿಳೆಯರು ಜಡೆ ಕತ್ತರಿಸಿದಾಗ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಾರೆ. ಇದು ಯಾವುದೇ ದೇವ ಮಾನವ, ಪ್ರೇತ, ಮಾಟಗಾತಿಯರ ಕೃತ್ಯವಿರಬಹುದು ಎಂಬ ಮಾತುಗಳು ಗ್ರಾಮಸ್ಥರಿಂದ ಕೇಳಿಬರುತ್ತಿವೆ.
ಸಹೋದರನ ಮನೆಗೆ ತೆರಳಿ ಮನೆಗೆ ಬಂದಿದ್ದೆವು. ಮನೆಯೊಳಗಿದ್ದ ಪತ್ನಿಯನ್ನು ಕೆಲಸವಿದ್ದ ಕಾರಣ ಹೊರಗೆ ಬರುವಂತೆ ಕರೆದಿದ್ದೆ. ಹೊರಗೆ ಬರುತ್ತಿದ್ದಂತೆಯೇ ರಸ್ತೆಯ ಬಳಿ ಶ್ಯಾಮ ದೇವಿ ಪ್ರಜ್ಞಾಹೀಳಾಗಿ ಬಿದ್ದಿ ಹೋಗಿದ್ದಳು. ಆಕೆಯ ಜಡೆ ಕತ್ತರಿಸಲಾಗಿತ್ತು. ಸ್ಥಳದಲ್ಲಿ ಸಾಕಷ್ಟು ಜನರಿದ್ದರು ಎಂದು ಶ್ಯಾಮಾ ದೇವಿ ಪತಿ ಮೆವರಾಮ್ ಕಶ್ಯಪ್ ಅವರು ಹೇಳಿದ್ದಾರೆ.
ಪ್ರಸ್ತುತ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.
ಜಡೆ ಕತ್ತರಿಸುವ ನಿಗೂಢ ಕೃತ್ಯಗಳು ರಾಜಧಾನಿ ದೆಹಲಿಯಲ್ಲಿ ಕಳೆದೆರಡು ದಿನಗಳಿಗಳಿಂದ ಭಾರೀ ಸುದ್ದಿ ಮಾಡುತ್ತಿವೆ. ಈ ವರೆಗೂ ನಾಲ್ಕು ಪ್ರಕರಣಗಳು ದಾಖಲಾಗಿವೆ. ದೆಹಲಿ ಬಳಿಕ ಇದೀಗ ಉತ್ತರಾಖಂಡ್ ನಲ್ಲೂ ಈ ರೀತಿಯ ಘಟನೆಗಳು ವರದಿಯಾಗುತ್ತಿರುವುದು ಮಹಿಳೆಯರ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics