ಬಿಹಾರದ ಬಕ್ಸಾರ್ ಜಿಲ್ಲೆಯ ಜಿಲ್ಲಾಧಿಕಾರಿ ಮುಕೇಶ್ ಪಾಂಡೆ
ಘಾಜಿಯಾಬಾದ್: ಬಿಹಾರದ ಬಕ್ಸಾರ್ ಜಿಲ್ಲೆಯ ಜಿಲ್ಲಾಧಿಕಾರಿ ಮುಕೇಶ್ ಪಾಂಡೆ ಅವರ ಮೃತದೇಹ ಉತ್ತರಪ್ರದೇಶದ ಘಾಜಿಯಾಬಾದ್ ರೈಲ್ವೇ ಹಳಿ ಬಳಿ ಗುರುವಾರ ಪತ್ತೆಯಾಗಿದೆ.
ಮುಕೇಶ್ ಪಾಂಡೆ 2012ರ ಬ್ಯಾಚ್ ನ ಅಧಿಕಾರಿಯಾಗಿದ್ದು, ಮೃತದೇಹದ ಪಕ್ಕದಲ್ಲಿಯೇ ಡೆತ್ ನೋಟ್ ದೊರಕಿರುವುದಾಗಿ ಪೊಲೀಸರು ಹೇಳಿದ್ದಾರೆ. ಡೆತ್ ನೋಟ್ ನಲ್ಲಿ ಜೀವನದಲ್ಲಿ ಜಿಗುಪ್ಸೆ ಹೊಂದಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಮುಕೇಶ್ ಹೇಳಿಕೊಂಡಿದ್ದಾರೆ.
ಮುಕೇಶ್ ಅವರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದು ಈ ವರೆಗೂ ತಿಳಿದುಬಂದಿಲ್ಲ. ಪ್ರಸ್ತುತ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಪ್ರಕರಣ ಸಂಬಂಧ ಈಗಾಗಲೇ ರೈಲ್ವೇ ಪೊಲೀಸ್ ಅಧಿಕಾರಿಗಳು ಹಾಗೂ ಘಾಜಿಯಾಬಾದ್ ಜಿಲ್ಲಾ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಬುಧವಾರ ಬಕ್ಸಾರ್ ಜಿಲ್ಲೆಯಿಂದ ಹೊರಟಿದ್ದ ಪಾಂಡೆಯವರು ಘಾಜಿಯಾಬಾದ್ ನಲ್ಲಿ ಸಂಬಂಧಿಕರನ್ನು ಭೇಟಿಯಾಗಲು ತೆರಳಿದ್ದರು. ಘಾಜಿಯಾಬಾದ್ ನ ಲೀಲಾ ಹೋಟೆಲ್ ನಲ್ಲಿ ತಂಗಿದ್ದ ಅವರ ಮೊಬೈಲ್ ಹೋಟೆಲ್'ನ ಪಕ್ಕದಲ್ಲಿ ಪತ್ತೆಯಾಗಿದೆ.
ಆತ್ಮಹತ್ಯೆಗೂ ಮುನ್ನ ಪಾಂಡೆಯವರು ತಮ್ಮ ಸ್ನೇಹಿತರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಆಘಾತಗೊಂಡ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಪಾಂಡೆಯವರನ್ನು ಹಿಂಬಾಲಿಸಲು ದೆಹಲಿ ಮಾಲ್ ಗೆ ಹೋಗಿದ್ದಾರೆ. ಆದರೆ, ಅವರು ದೊರಕಿಲ್ಲ. ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ಪಾಂಡೆ ಮಾಲ್ ನಿಂದ ಮೆಟ್ರೋ ನಿಲ್ದಾಣಕ್ಕೆ ಹೋಗುತ್ತಿರುವುದು ಕಂಡು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics