ಲಖನೌ: ಆಮ್ಲಜನಕದ ಕೊರೆಯಿಂದಾಗಿ ಕೇವಲ 36 ಗಂಟೆಗಳಲ್ಲಿ ಬರೊಬ್ಬರಿ 30 ಮಕ್ಕಳು ಅಸು ನೀಗಿರುವ ಘಟನೆ ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ನಡೆದಿದೆ.
ಗೋರಕ್ ಪುರದಲ್ಲಿರುವ ಬಿ.ಆರ್.ಡಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದ್ದು, ಆಮ್ಲಜನಕ ಕೊರತೆಯಿಂದಾಗಿ ನವಜಾತ ಶಿಶುಗಳೂ ಸೇರಿದಂತೆ 30 ಮಕ್ಕಳು ಶುಕ್ರವಾರ ಮೃತಪಟ್ಟಿವೆ. ನವಜಾತ ಶಿಶುಗಳ ವಾರ್ಡ್‌ನಲ್ಲಿದ್ದ 10 ಶಿಶುಗಳು ಮತ್ತು ಮಿದುಳಿನ ನಂಜಿನಿಂದ ದಾಖಲಾಗಿದ್ದ 10 ಮಕ್ಕಳು ಆಮ್ಲಜನಕ ಕೊರತೆಯಿಂದ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ ಹಲವು ಮಕ್ಕಳ ಪರಿಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಶಂಕಿಸಲಾಗಿದೆ. ಮೂಲಗಳ ಪ್ರಕಾರ ಆಸ್ಪತ್ರೆಗೆ ಆಮ್ಲಜನಕ ಸಿಲಿಂಡರ್ ಪೂರೈಸುತ್ತಿದ್ದ ಕಂಪೆನಿಗೆ ಅಂದಾಜು ರು,70 ಲಕ್ಷ ಬಾಕಿ ಪಾವತಿಸಬೇಕಿದೆ. ಬಾಕಿ ಹಣ ಪಾವತಿಯಾಗದ ಹೊರತು ಆಮ್ಲಜನಕ ಸಿಲಿಂಡರ್ ಪೂರೈಸುವುದಿಲ್ಲ ಎಂದು ಕಂಪೆನಿ ಕೆಲವು ದಿನಗಳಿಂದ ಸಿಲಿಂಡರ್ ಪೂರೈಕೆ ಸ್ಥಗಿತಗೊಳಿಸಿದ್ದೇ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ.
ಶುಕ್ರವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಆಮ್ಲ ಜನಕದ ಕೊರತೆ ತೀವ್ರವಾದ್ದರಿಂದ ಆಸ್ಪತ್ರೆ ಬಾಕಿ ಹಣವನ್ನು ಪಾವತಿಸಿತ್ತು. ಅದಾದ ನಂತರ ಆಮ್ಲಜನಕ ಸಿಲಿಂಡರ್ ಪೂರೈಸುವುದಾಗಿ ಕಂಪೆನಿ ಹೇಳಿತ್ತು. ಅಷ್ಟರಲ್ಲಾಗಲೇ ದುರಂತ ಸಂಭವಿಸಿ ಹೋಗಿದ್ದು, 30 ಅಮಾಯಕ ಮಕ್ಕಳು ಸಾವಿಗೀಡಾಗಿದ್ದಾರೆ.
ಆಮ್ಲಜನಕ ಕೊರತೆಯಿಂದಾಗಿಯೇ ಮಕ್ಕಳ ಸಾವು: ವೈದ್ಯಾಧಿಕಾರಿ ಸ್ಪಷ್ಟನೆ
ಇನ್ನು ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಆರ್.ಎಸ್. ಶುಕ್ಲಾ ಅವರು, ಆಮ್ಲಜನಕ ಕೊರತೆಯಿಂದಾಗಿಯೇ ಕೆಲವು ನವಜಾತ ಶಿಶುಗಳು ಸಾವಿಗೀಡಾಗಿರುವುದು ನಿಜ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಎಷ್ಟು ಮಕ್ಕಳು ಮೃತಪಟ್ಟಿದ್ದಾರೆ ಎಂಬುದನ್ನು ಅವರು ಹೇಳಿಲ್ಲ. ಗುರುವಾರ ರಾತ್ರಿಯಿಂದಲೇ ಆಮ್ಲಜನಕದ ಕೊರತೆ ಆರಂಭವಾಗಿದ್ದು 10 ಮಕ್ಕಳು ಮೃತಪಟ್ಟಿದ್ದಾರೆ. ಶುಕ್ರವಾರ ಮತ್ತೆ 10 ಮಕ್ಕಳು ಪ್ರಾಣ ಬಿಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.