ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮೇಘಸ್ಫೋಟ ಸಂಭವಿಸಿದ್ದು, 3 ಮಂದಿ ಸಾವನ್ನಪ್ಪಿದ್ದು, 7 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಮುಖವಾಗಿ ಮೇಘಸ್ಫೋಟದ ಬಳಿಕ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಾನಸ ಸರೋವರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮೂರು ಸೇತುವೆಗಳು ಕುಸಿದಿದ್ದು, ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಂಗ್ಟಿ ಮತ್ತು ಸಿಮ್ ಖೋಲಾ ಜಿಲ್ಲೆಗಳಲ್ಲಿ ಸೇತುವೆಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ಕಾಳಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಸತತವಾಗಿ ಕಾಳಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಮಾನಸ ಸರೋವರ ಯಾತ್ರೆಗೆ ಸಂಪರ್ಕ ಕಲ್ಪಿಸುವ ಐಲಾಘಡ್ ನಲ್ಲಿ ಪ್ರವಾಹದಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಅಂತೆಯೇ ಮಗ್ಟಾ ನಾಲಾ ಪ್ರಾಂತ್ಯದಲ್ಲಿ ಸೇತುವೆಗಳು ಕುಸಿದಿದ್ದು, ಈ ವೇಳೆ ಮೂವರು ಸೈನಿಕರು ಹಾಗೂ 4 ಮಂದಿ ಯಾತ್ರಾರ್ಥಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಮಲ್ಪಾ ಪ್ರಾಂತ್ಯದಲ್ಲಿ ನೀರಿನಲ್ಲಿ ಕೋಚ್ಚಿ ಹೋಗಿದ್ದ ಮೂರು ಶವಗಳು ದೊರೆತಿದ್ದು, ಪ್ರವಾಹ ಮತ್ತು ಭೂಕುಸಿತದ ಪರಿಣಾಮ ಮಾನಸ ಸರೋವರ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ನಾಪತ್ತೆಯಾಗಿರುವ ಸೈನಿಕರು ಹಾಗೂ ಯಾತ್ರಾರ್ಥಿಗಳಿಗಾಗಿ ತೀವ್ರ ಶೋಧ ಆರಂಭಿಸಲಾಗಿದೆ.
ನಾಲ್ಕು ತಿಂಗಳ ಮಾನಸ ಸರೋವರ ಯಾತ್ರೆ ಕಳೆದ ಜೂನ್ ನಲ್ಲಿ ಆರಂಭವಾಗಿತ್ತು. ವಿದೇಶಾಂಗ ಸಚಿವರಾದ ಸುಷ್ಮಾ ಸ್ವರಾಜ್ ಅವರು ಯಾತ್ರೆಗೆ ಚಾಲನೆ ನೀಡಿದ್ದರು. ಪ್ರಸಕ್ತ ಸಾಲಿನ ಯಾತ್ರೆಗಾಗಿ ಅರ್ಜಿ ಸಲ್ಲಿಸಿರುವವರ ಪೈಕಿ ಸುಮಾರು 3,303 ಮಂದಿ ಪುರುಷರು, 1,139 ಮಹಿಳೆಯರು ಮತ್ತು 826 ಮಂದಿ ಹಿರಿಯ ನಾಗರಿಕರಾಗಿದ್ದಾರೆ ಎಂದು ತಿಳಿದುಬಂದಿದೆ.