ಕೋಲ್ಕತ್ತಾ(ಉತ್ತರಪ್ರದೇಶ): ತ್ರಿವಳಿ ತಲಾಕ್ ಅನ್ನು ರದ್ದು ಪಡಿಸಿರುವ ಸುಪ್ರೀಂಕೋರ್ಟ್ ತೀರ್ಪು 'ಸಾಟಿಯಿಲ್ಲದ ಮತ್ತು ಅನನ್ಯ' ನಿರ್ಧಾರ ಎಂದು ಮುಸ್ಲಿಂ ಪಾದ್ರಿ ಮೌಲಾನಾ ಅಹ್ಮದ್ ಬರ್ಕಾಟಿ ಹೇಳಿದ್ದಾರೆ.
ಸುಪ್ರೀಂಕೋರ್ಟ್ ನ ಐತಿಹಾಸಿಕ ತೀರ್ಪು ಭಾರತೀಯ ಮುಸ್ಲಿಂರಿಗೆ ಹೊಸ ಆಶಾದಾಯಕದ ಬೆಳಕು ಸಿಕ್ಕಂತಾಗಿದ್ದು ಇದರಿಂದ ತ್ರಿವಳಿ ತಲಾಕ್ ಅನ್ನು ದುರುಪಯೋಗ ಪಡಿಸಿಕೊಳ್ಳುವುದು ತಪ್ಪುತ್ತದೆ ಎಂದಿರುವ ಅವರು ಜತೆಗೆ ಈ ತೀರ್ಪಿನಿಂದ ಮುಸ್ಲಿಂ ಪುರುಷರು ಮತ್ತು ಮಹಿಳೆಯರಿಗೆ ನಿರಾಶೆಯಾಗುವುದಿಲ್ಲ. ಆದರೆ ಶರಿಯಾತ್ ಕಾನೂನಿನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಭರವಸೆ ಇದೆ ಎಂದರು.
ತ್ರಿವಳಿ ತಲಾಖ್ ಪ್ರಶ್ನಿಸಿ ಕೆಲ ಮಹಿಳೆಯರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಕೇಂದ್ರ ಸರ್ಕಾರವು ಸಹ ಬೆಂಬಲಿಸಿತ್ತು. ಈ ವಿಚಾರವನ್ನು ಲಿಂಗ ಸಮಾನತೆ, ಸಾಂವಿಧಾನಿಕ ನೈತಿಕತೆ ಮತ್ತು ಆತ್ಮಸಾಕ್ಷಿಯ ದೃಷ್ಟಿಯಿಂದ ಪರಿಶೀಲನೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿತ್ತು. ತ್ರಿವಳಿ ತಲಾಖ್ ಎಂಬುದು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವಣ ಸಂಘರ್ಷ ಅಲ್ಲ. ಇದು ಮುಸ್ಲಿಂ ಸಮುದಾಯದೊಳಗಿನ ಗಂಡಸರು ಮತ್ತು ಹೆಂಗಸರ ನಡುವಣ ಸಂಘರ್ಷ ಎಂದು ಸರ್ಕಾರ ವಾದಿಸಿತ್ತು. ತ್ರಿವಳಿ ತಲಾಖ್ ಪದ್ಧತಿಯು ಇಸ್ಲಾಂ ಧರ್ಮದ ಮೂಲಭೂತ ಅಂಶ ಅಲ್ಲ ಎಂದೂ ಸರ್ಕಾರ ಪ್ರತಿಪಾದಿಸಿತ್ತು.
ಮುಖ್ಯ ನ್ಯಾಯಮೂರ್ತಿ ಜೆಎಸ್ ಖೇಹರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ತ್ರಿವಳಿ ತಲಾಖ್ ಗೆ ಸಂಬಂಧಿಸಿದ ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ್ದು ಇದರಲ್ಲಿ ಮೂವರು ನ್ಯಾಯಾಧೀಶರು ತ್ರಿವಳಿ ತಲಾಕ್ ಅಸಂವಿಧಾನಿಕ ಎಂದು ಹೇಳಿ ರದ್ದು ಪಡೆಸಿದೆ.