ಚಂಡೀಘಡ: ಬಾಬಾ ಗುರ್ಮಿತ್ ರಾಮ್ ರಹೀಮ್ ಸಿಂಗ್ ವಿರುದ್ಧ ಅತ್ಯಾಚಾರ ಪ್ರಕರಣದ ತೀರ್ಪು ಹೊರ ಬೀಳುತ್ತಿದ್ದಂತೆಯೇ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿದೆ ಎಂದು ತಿಳಿದುಬಂದಿದೆ.
ಪಂಜಾಬ್ ನ 2 ರೈಲು ನಿಲ್ದಾಣಗಳಲ್ಲಿ ಬಾಬಾ ಬೆಂಬಲಿಗರು ಹಿಂಸಾಚಾರ ನಡೆಸುತ್ತಿದ್ದು, ರೈಲು ನಿಲ್ದಾಣಗಳಲ್ಲಿ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಹರ್ಯಾಣದಲ್ಲಿ ಖಾಸಗಿ ಸುದ್ದಿ ವಾಹಿನಿಗಳ ಎರಡು ಒಬಿ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಆಕ್ರೋಶಿತ ಪ್ರತಿಭಟನಾಕಾರರು ಕಲ್ಲು ತೂರಾಟದಲ್ಲಿ ತೊಡಗಿದ್ದಾರೆ. ಡೇರಾ ಸಚ್ಚಾ ಆಶ್ರಮವಿರುವ ಸಿರ್ಸಾದಲ್ಲೂ ವ್ಯಾಪಕ ಹಿಂಸಾಚಾರ ನಡೆಸಲಾಗುತ್ತಿದ್ದು, ಅಲ್ಲಿ ನೆರೆದಿರುವ ಸುಮಾರು 2 ಲಕ್ಷಕ್ಕೂ ಅಧಿಕ ಅನುಯಾಯಿಗಳು ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡುತ್ತಿದ್ದಾರೆ.
ಅಂತೆಯೇ ರಕ್ಷಣೆಗೆ ಆಗಮಿಸಿರುವ ಸೇನಾ ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳ ಮೇಲೆ ಅನುಯಾಯಿಗಳು ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಶಾಂತಿ ಕಾಪಾಡುವಂತಿ ಉಭಯ ರಾಜ್ಯಗಳ ಸಿಎಂಗಳ ಮನವಿ
ಏತನ್ಮಧ್ಯೆ ರಾಮ್ ರಹೀಮ್ ಸಿಂಗ್ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾದ ಬೆನ್ನಲ್ಲೇ ಹರ್ಯಾಣ ಮತ್ತು ಪಂಜಾಬ್ ನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಶಾಂತಿ ಕಾಪಾಡುವಂತೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಜನತೆಯಲ್ಲಿ ಮನವಿ ಮಾಡಿದ್ದಾರೆ. ಪಂಜಾಬ್ ಸಿಎಂ ಕ್ಯಾಪ್ಟರ್ ಅಮರೀಂದರ್ ಸಿಂಗ್ ಅವರು ರಾಜ್ಯಾದ್ಯಂತ 144 ಸೆಕ್ಷನ್ ಜಾರಿ ಮಾಡಿದ್ದು, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಬೇಕಾದ ಯಾವುದೇ ಕಠಿಣಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಅದರಂತೆ ಕೇಂದ್ರೀಯ ಪಡೆಗಳಿಂದ ಸುಮಾರು 10 ಕಂಪನಿಗಳ ಯೋಧರನ್ನು ಭದ್ರತೆ ನಿಯೋಜಿಸಲಾಗಿದೆ. ಇದಲ್ಲದೆ 85 ಕೇಂದ್ರೀಯ ಪ್ಯಾರಾಮಿಲಿಟರಿ ಪಡೆಗಳನ್ನು, ಅಶ್ರುವಾಯು ದಳಗಳನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ಅಂತೆಯೇ ಇತ್ತ ಹರ್ಯಾಣದಲ್ಲೂ ಶಾಂತಿ ಕಾಪಾಡುವಂತೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರೂ ಕೂಡ ಮನವಿ ಮಾಡಿದ್ದಾರೆ. ಹರ್ಯಾಣ ಜನತೆ ಶಾಂತಿ ಕಾಪಾಡಬೇಕು. ಯಾವುದೇ ಕಾರಣಕ್ಕೂ ಭದ್ರತೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪ್ರಮುಖವಾಗಿ ಡೇರಾ ಸಚ್ಚಾ ಆಶ್ರಮದ ಬಳಿ ಅನುಯಾಯಿಗಳು ಸಹೋದರತ್ವವನ್ನು ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಅಂತೆಯೇ ರಾಜ್ಯದ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಚ್ಚುವರಿ ಭದ್ರಾತ ಪಡೆಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.