ನವದೆಹಲಿ: ಗೋದ್ರಾ ಹಿಂಸಾಚಾರದ ವೇಳೆ ಹಾನಿಗೀಡಾಗಿದ್ದ ಪ್ರಾರ್ಥನಾ ಮಂದಿರಗಳ ದುರಸ್ತಿ ವೆಚ್ಚವನ್ನು ಗುಜರಾತ್ ಸರ್ಕಾರವೇ ಭರಿಸಬೇಕು ಎಂಬ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಗುಜರಾತ್ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸಮ್ಮತಿ ಸೂಚಿಸಿದೆ.
2002ರ ಗೋದ್ರೋತ್ತರ ಹಿಂಸಾಚಾರ ಪ್ರಕರಣದಲ್ಲಿ ಗುಜರಾತ್ ನಲ್ಲಿ ಹಾನಿಗೀಡಾಗಿದ್ದ ಮಸೀದಿ ಹಾಗೂ ಪ್ರಾರ್ಥನಾ ಮಂದಿರಿಗಳ ದುರಸ್ತಿ ಕಾರ್ಯದ ವೆಚ್ಚವನ್ನು ಗುಜರಾತ್ ಸರ್ಕಾರ ಭರಿಸಬೇಕು ಎಂಬ ಗುಜರಾತ್ ಹೈಕೋರ್ಟ್ ಆದೇಶಕ್ಕೆ ಮಂಗಳವಾರ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಈ ಬಗ್ಗೆ ಗುಜರಾತ್ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಪಿಸಿ ಪಂತ್ ನೇತೃತ್ವದ ದ್ವಿಸದಸ್ಯ ಪೀಠ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಗುಜರಾತ್ ಸರ್ಕಾರ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಇಂದು ವಿಚಾರಣೆಗೆ ತೆಗೆದುಕೊಂಡಿದೆ.
ಅಲ್ಲದೆ ಈ ಹಿಂದೆ ಗುಜರಾತ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಗುಜರಾತ್ ಸರ್ಕಾರದ ಪರ ವಾದ ಮಂಡನೆ ಮಾಡಿದ್ದ ಅಡಿಷನಲ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಸುಪ್ರೀಂ ಕೋರ್ಟ್ ತಮ್ಮ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದೆ. ಪ್ರಮುಖವಾಗಿ ಈ ಹಿಂದೆಯೇ ರಾಜ್ಯ ಸರ್ಕಾರ ಹಿಂಸಾಚಾರದ ವೇಳೆ ಹಾನಿಗೀಡಾದ ಪ್ರಾರ್ಥನಾ ಮಂದಿರ. ಅಂಗಡಿ-ಮುಂಗಟ್ಟು, ಮನೆಗಳಿಗೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ಸರ್ಕಾರದ ಕ್ರಮವನ್ನು ಇದೀಗ ಸುಪ್ರೀಂ ಕೋರ್ಟ್ ಕೂಡ ಒಪ್ಪಿಕೊಂಡಿದ್ದು, ಇದೇ ಕಾರಣಕ್ಕೆ ತಮ್ಮ ಅರ್ಜಿ ವಿಚಾರಣೆಗೆ ಸಮ್ಮತಿ ಸೂಚಿಸಿದೆ ಎಂದು ಹೇಳಿದ್ದಾರೆ.
2002ರ ಹಿಂಸಾಚಾರದ ವೇಳೆ ಗುಜರಾತ್ ನ ಸುಮಾರು 500ಕ್ಕೂ ಹೆಚ್ಚು ಮಸೀದಿಗಳಿಗೆ ಹಾನಿಯಾಗಿತ್ತು. ಈ ಮಸೀದಿಗಳಿಗಾದ ಹಾನಿಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಮಸೀದಿಗಳ ಆಡಳಿತ ಮಂಡಳಿ ಸದಸ್ಯರು ಕೋರಿದ್ದರು. ಅಂತೆಯೇ ಗುಜರಾತ್ ಹೈಕೋರ್ಟ್ ಕೂಡ ಈ ಬಗ್ಗೆ ತೀರ್ಪು ನೀಡಿ ಸರ್ಕಾರವೇ ದುರಸ್ತಿ ವೆಚ್ಚ ಭರಿಸಬೇಕು ಎಂದು ಆದೇಶಿಸಿತ್ತು.