ಚೆನ್ನೈ: ಭಾರತ್ ಇಂಟರ್ ಫೇಸ್ ಫಾರ್ ಮನಿ ಮೊಬೈಲ್ ಅಪ್ಲಿಕೇಶನ್(ಭೀಮ್) ಬಳಸಿಕೊಂಡು ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ ಆಧಾರದ ಮೇಲೆ ಇನ್ನು ಮುಂದೆ ರೈಲು ಪ್ರಯಾಣಿಕರು ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ರೈಲು ಟಿಕೆಟ್ ಗಳನ್ನು ಖರೀದಿಸಬಹುದು.
ನಗದುರಹಿತ ಪಾವತಿ ವಿಧಾನವನ್ನು ಉತ್ತೇಜಿಸಲು ರೈಲ್ವೆ ಇಲಾಖೆ ಭೀಮ್ ಮೊಬೈಲ್ ಆಪ್ ಮೂಲಕ ಟಿಕೆಟ್ ದರವನ್ನು ಪಾವತಿ ಮಾಡಬಹುದು. ಇದನ್ನು ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದೆ. ಪ್ರಸ್ತುತ ಪ್ರಯಾಣಿಕರು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳನ್ನು ಬಳಸಿಕೊಂಡು ಕಾಯ್ದಿರಿಸಿದ ಹಾಗೂ ಕಾಯ್ದಿರಿಸದ ಟಿಕೆಟ್ ಗಳನ್ನು ಕೌಂಟರ್ ಗಳಲ್ಲಿ ಖರೀದಿಸಬಹುದಾಗಿದೆ.
ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ ವ್ಯವಸ್ಥೆ ಒಂದೇ ಮೊಬೈಲ್ ಅಪ್ಲಿಕೇಶನ್ ನಲ್ಲಿ ಹಲವು ಬ್ಯಾಂಕ್ ಖಾತೆಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದು ಹಣ ವರ್ಗಾವಣೆ ಸೇರಿದಂತೆ ಹಲವು ಬ್ಯಾಂಕಿಂಗ್ ಲಕ್ಷಣಗಳನ್ನು ಒಳಗೊಂಡಿರುತ್ತದೆ.
ಭೀಮ್ ಆಪ್ ಮೂಲಕ ಹಣ ಪಾವತಿ ಮಾಡಲು, ಬ್ಯಾಂಕುಗಳಲ್ಲಿ ಯುಪಿಐ ಪಾವತಿಗಳಿಗೆ ಸಹಿ ಹಾಕಿದ ಪ್ರಯಾಣಿಕರು 20 ಅಂಕೆಗಳ ವಾಸ್ತವ ಪಾವತಿ ವಿಳಾಸ(ವಿಪಿಎ)ಯನ್ನು ಪಡೆಯುತ್ತಾರೆ.
ಟಿಕೆಟ್ ಕೌಂಟರ್ ಗಳಲ್ಲಿ ಟಿಕೆಟ್ ಖರೀದಿಸುವಾಗ ವಿಪಿಎ ವಿಳಾಸವನ್ನು ಟಿಕೆಟ್ ಕ್ಲರ್ಕ್ ಗಳಿಗೆ ತೋರಿಸಬೇಕು. ಕಾಯ್ದಿರಿಸುವ ಪೋರ್ಟಲ್ ನಲ್ಲಿ ವಿಪಿಎಯನ್ನು ನೀಡಿದಾಗ ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶ ಬರುತ್ತದೆ. ಅದನ್ನು ಅನುಮೋದಿಸಬೇಕು. ಹಣ ಪಾವತಿ ಮಾಡಿದ ನಂತರ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುತ್ತದೆ. ಟಿಕೆಟ್ ಕಾಯ್ದಿರಿಸಿದ ಕ್ಲರ್ಕ್ ಗೆ ಕೂಡ ತಮ್ಮ ಕಂಪ್ಯೂಟರ್ ನಲ್ಲಿ ಸಂದೇಶ ಬರುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಹಣ ಪಾವತಿ ಪ್ರಕ್ರಿಯೆ ಮುಗಿಯುತ್ತದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.
ಪ್ರಾಯೋಗಿಕ ಯೋಜನೆಯನ್ನು ಮೂರು ತಿಂಗಳ ಅವಧಿಗೆ ಜಾರಿಗೆ ತರಲಾಗುತ್ತಿದ್ದು ಐಸಿಐಸಿಐ ಮತ್ತು ಎಸ್ ಬಿಐ ಬ್ಯಾಂಕುಗಳಲ್ಲಿ ಖಾತೆಗಳನ್ನು ಹೊಂದಿರುವ ಪ್ರಯಾಣಿಕರು ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಆ ನಂತರದಲ್ಲಿ ಇನ್ನಷ್ಟು ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳನ್ನು ಯುಪಿಐ ಪಾವತಿ ವಿಧಾನಕ್ಕೆ ಬಳಸಿಕೊಳ್ಳಬಹುದು.