ಅಹ್ಮದಾಬಾದ್: ಯಾವುದೇ ಕಾರಣಕ್ಕೂ ಮತದಾನದಿಂದ ತಪ್ಪಿಸಿಕೊಳ್ಳದಂತೆಯೂ ಮತ್ತು ದಾಖಲೆ ಪ್ರಮಾಣದಲ್ಲಿ ಮತದಾನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಜನತೆಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಮನವಿ ಮಾಡಿರುವ ಪ್ರಧಾನಿ ಮೋದಿ, ಮೊದಲ ಹಂತದ ಮತದಾನ ಆರಂಭವಾಗಿದ್ದು, ಗುಜರಾತ್ ರಾಜ್ಯದ ಯುವಕರು ಮತ್ತು ಪ್ರಜ್ಞಾವಂತ ನಾಗರಿಕರು ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡುತ್ತಿದ್ದೇನೆ. ಮತದಾನ ಪ್ರಕ್ರಿಯೆ ವೇಳೆ ದಾಖಲೆ ಪ್ರಮಾಣದಲ್ಲಿ ಮತದಾನವಾಗಲಿ..ಪ್ರಮುಖವಾಗಿ ಯುವಕರು ತಾವಾಗಿಯೇ ಮುಂದೆ ಬಂದು ಮತದಾನ ಮಾಡುವಂತೆ ಮತ್ತು ಮತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗುವಂತೆ ಮನವಿ ಮಾಡಿದ್ದಾರೆ.
ಗುಜರಾತ್ ನಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದ್ದು, ಮೊದಲ ಹಂತದಲ್ಲಿ ಒಟ್ಟು 89 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, 19 ಜಿಲ್ಲೆಗಳಲ್ಲಿ ಚುನಾವಣೆ ಬಿರುಸಿನಿಂದ ಸಾಗಿದೆ. ಕಚ್, ಮೊರ್ಬಿ, ಜಾಮ್ ನಗರ್, ಸುರೇಂದ್ರನಗರ್, ದೇವ್ಭೂಮಿ ದ್ವಾರಕಾ, ರಾಜ್ ಕೋಟ್, ಬೊಟಾದ್, ಪೋರ್ ಬಂದರ್, ಜುನಘಡ್, ಅಮ್ರೇಲಿ, ಗಿರ್ ಸೋಮನಾಥ್, ಭಾವನಗರ, ಭರೂಚ್, ನರ್ಮದಾ, ಸೂರತ್, ಟ್ಯಾಪಿ, ನವಸಾರಿ, ಡ್ಯಾಂಗ್ ಮತ್ತು ವಲ್ಸಾದ್ ಸೇರಿದಂತೆ ಒಟ್ಟು 19 ಜಿಲ್ಲೆಗಳಲ್ಲಿ ಮತದಾನ ಬಿರುಸಿನಿಂದ ಸಾಗಿದೆ. ಒಟ್ಟು 2.12 ಕೋಟಿ ಮತದಾರರು 977 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.
ಮತದಾನಕ್ಕಾಗಿ ಒಟ್ಟು 24,689 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 19 ಜಿಲ್ಲೆಗಳ ಒಟ್ಟು 2,12,31,652 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಪೈಕಿ 1,11,05,933 ಪುರುಷ ಮತದಾರರಿದ್ದು, 1,01,25,472 ಮಹಿಳಾ ಮತದಾರರಿದ್ದಾರೆ. ಇನ್ನು 247 ಮಂದಿ ತೃತೀಯ ಲಿಂಗಿಗಳೂ ಕೂಡ ಇಂದು ಮತದಾನ ಮಾಡುತ್ತಿರುವುದು ವಿಶೇಷವಾಗಿದೆ. ಸಂಜೆ 5 ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಎರಡನೇ ಹಂತದ ಮತದಾನ ಡಿಸೆಂಬರ್14 ರಂದು ನಡೆಯಲಿದೆ.