ರಯಾನ್ ಶಾಲೆ ಬಳಿ ಭದ್ರತಾ ಸಿಬ್ಬಂದಿ
ನವದೆಹಲಿ: ಗುರುಗ್ರಾಮದ ರಯಾನ್ ಇಂಟರ್ ನ್ಯಾಷನಲ್ ಶಾಲೆಯ 2ನೇ ತರಗತಿಯ ವಿದ್ಯಾರ್ಥಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ 11ನೇ ತರಗತಿಯ ವಿದ್ಯಾರ್ಥಿಗೆ ಬಾಲಾಪರಾಧ ನ್ಯಾಯಾಲಯ ಜಾಮೀನು ನೀಡಲು ಶುಕ್ರವಾರ ನಿರಾಕರಿಸಿದೆ.
ಜಾಮೀನು ಕೋರಿ ಬಾಲ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಬಾಲಾಪರಾಧ ನ್ಯಾಯಾಲಯ ವಜಾಗೊಳಿಸಿದ್ದು, 16 ವರ್ಷದ ಆರೋಪಿಯ ಬೆರಳಚ್ಚು ಪಡೆಯಲು ಸಿಬಿಐಗೆ ಅನುಮತಿ ನೀಡಿದೆ.
ಈ ಮಧ್ಯೆ, ಮನೋರೋಗ ತಜ್ಞರು ಬಾಲ ಆರೋಪಿಯ ಮಾನಸಿಕ ಪರೀಕ್ಷಾ ವರದಿ ನೀಡಿದ್ದು, ಅದರಲ್ಲಿ ಆರೋಪಿ ಶಾಲೆಯ ಕುಡಿಯುವ ನೀರಿನ ತೊಟ್ಟಿಯಲ್ಲಿ ವಿಷ ಬೆರೆಸಲು ಬಯಸಿದ್ದ ಎಂಬ ಆತಂಕಕಾರಿ ವಿಷಯ ತಿಳಿಸಿದ್ದಾರೆ. ಆರೋಪಿ ಬಾಲಕ ತುಂಬಾ ಆಕ್ರಮಣಶೀಲ ಪ್ರವೃತ್ತಿ ಹೊಂದಿದ್ದು, ಒಮ್ಮೆ ಶಾಲೆಯಲ್ಲಿಯೇ ಕುಡಿದಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
11ನೇ ತರಗತಿ ವಿದ್ಯಾರ್ಥಿ ಈಗಾಗಲೇ ತಾನು ಪ್ರದ್ಯುಮ್ನನನ್ನು ಕತ್ತು ಸೀಳಿ ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಈ ಪ್ರಕರಣದಲ್ಲಿ ಇತರ ವ್ಯಕ್ತಿಗಳು ಶಾಮೀಲಾಗಿದ್ದಾರೆಯೇ ಎಂಬುದರ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ.