ದೇಶ

ಮಸೂದ್ ಅಜರ್ ಬಳಿಕ ಝಾಕಿರ್ ನಾಯ್ಕ್ ವಿರುದ್ಧದ ರೆಡ್ ಕಾರ್ನರ್ ನೋಟಿಸ್ ಗೂ ಚೀನಾ ಅಡ್ಡಗಾಲು!

Srinivasamurthy VN
ನವದೆಹಲಿ: ವಿವಾದಿತ ಮೂಲಭೂತವಾದಿ ಭಾಷಣಕಾರ ಹಾಗೂ ಭಾರತದ ಮೋಸ್ಟ್ ವಾಂಟೆಡ್ ಆರೋಪಿ ಝಾಕಿರ್ ನಾಯ್ಕ್ ವಿರುದ್ಧದ ರೆಡ್ ಕಾರ್ನರ್ ನೋಟಿಸ್ ಗೂ ಚೀನಾ ಅಡ್ಡಗಾಲು ಹಾಕಿದೆ.
ಡಾ.ಝಾಕಿರ್ ನಾಯ್ಕ್ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ನೀಡಬೇಕೆಂಬ ಕೇಂದ್ರ ಸರ್ಕಾರದ ಮನವಿಯನ್ನು ಇಂಟರ್ ಪೋಲ್ ತಿರಸ್ಕರಿಸಿದ್ದು ಮಾತ್ರವಲ್ಲದೇ ವಿಶ್ವದಾದ್ಯಂತ ಇರುವ ತನ್ನ ಎಲ್ಲಾ ಕಚೇರಿಗಳಿಗೆ ಈ ಕುರಿತು  ಮಾಹಿತಿ ನೀಡಿ ಡಾ. ನಾಯ್ಕ್ ಕುರಿತ ಎಲ್ಲಾ ಮಾಹಿತಿಗಳನ್ನು ತೆಗೆದು ಹಾಕಬೇಕು ಎಂದು ಸೂಚನೆ ನೀಡಿದೆ. 
ಮಾಹಿತಿಗಳನ್ವಯ ಡಾ.ನಾಯ್ಕ್ ವಿರುದ್ಧ ಭಾರತ ಸರ್ಕಾರ ಮಾಡಿರುವ ಆರೋಪಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದ ಬಳಿಕ ಇಂಟರ್ ಪೋಲ್ ಈ ತೀರ್ಮಾನಕ್ಕೆ ಬಂದಿದೆ ಎಂದು ವರದಿಯಾಗಿದೆ. ಝಾಕಿರ್ ನಾಯ್ಕ್  ವಿರುದ್ಧದ  ಭಾರತದ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಹಾಗೂ ಅವುಗಳನ್ನು ಕೇವಲ ಊಹಾಪೋಹದ ಆಧಾರದಲ್ಲಿ ಮಾಡಲಾಗಿದೆ ಎಂದು ಇಂಟರ್ ಪೋಲ್ ಉಲ್ಲೇಖಿಸಿದೆ. ಝಾಕಿರ್ ನಾಯ್ಕ್ ಅವರ ಲಂಡನ್ ಮೂಲದ ಕಾನೂನು  ಸೇವೆಗಳ ಕಛೇರಿಗೆ ಇಂಟರ್ ಪೋಲ್ ತನ್ನ ನಿರ್ಧಾರವನ್ನು ಡಿ.11ರಂದು ತಿಳಿಸಿದೆ ಎಂದು ತಿಳಿದುಬಂದಿದೆ.
ಭಾರತ ಸರ್ಕಾರದ ಸಂಸ್ಥೆಗಳು ಈ ವಿಷಯದಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸದೆ ಮಾಡಿರುವ ಆರೋಪಗಳಲ್ಲಿ ಅಂತಾರಾಷ್ಟ್ರೀಯ ಹಿತಾಸಕ್ತಿಯ ಕೊರತೆ ಇದೆ ಎಂದು ಇಂಟರ್ ಪೋಲ್ ಹೇಳಿದೆ. ಅಂತೆಯೇ ಝಾಕಿರ್  ನಾಯ್ಕ್  ಕುರಿತ ಮಾಹಿತಿಗಳನ್ನು ತನ್ನ ದಾಖಲೆಗಳಲ್ಲಿ ಇಟ್ಟುಕೊಳ್ಳುವುದು ನಿಯಮಗಳ ಪ್ರಕಾರ ಸರಿಯಲ್ಲ ಎಂದು ಅವುಗಳನ್ನು ತೆಗೆದು ಹಾಕಲು ನಿರ್ಧರಿಸಿದೆ. 
ಭಾರತದ ಪ್ರಯತ್ನಕ್ಕೆ ಮತ್ತೆ ಚೀನಾ ಅಡ್ಡಗಾಲು
ಇಂಟರ್ ಪೋಲ್ ನ ಹಾಲಿ ಅಧ್ಯಕ್ಷ ಮೆಂಗ್ ಹಾಂಗ್ವೀಯಿ ಮೂಲತಃ ಚೀನಾದವರಾಗಿದ್ದು, ಅಲ್ಲದೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆಪ್ತರಲ್ಲಿ ಒಬ್ಬರಾಗಿದ್ದಾರೆ. ಹೀಗಾಗಿ ಪ್ರಸ್ತುತ ಝಾಕಿರ್ ನಾಯ್ಕ್ ವಿರುದ್ಧದ ರೆಡ್ ಕಾರ್ನರ್ ನೋಟಿಸ್  ನೀಡಲು ಮೆಂಗ್ ಹಾಂಗ್ವೀಯಿ ನಿರಾಕರಿಸಿದ್ದಾರೆ. ವಿಶ್ವಸಂಸ್ಥೆಯಲ್ಲಿ ಈ ಹಿಂದೆ ಜೈಶ್ ಇ ಮೊಹಮದ್ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭಾರತ ಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿತ್ತು. ಇದೀಗ  ಮೆಂಗ್ ಹಾಂಗ್ವೀಯಿ ಮೂಲಕ ಝಾಕಿರ್ ನಾಯ್ಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ನೋಟಿಸ್ ಜಾರಿಗೂ ಅಡ್ಡಗಾಲು ಹಾಕಿದೆ. ಝಾಕಿರ್ ನಾಯ್ಕ್ ವಿರುದ್ಧ  ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದ ಕೇಂದ್ರ  ಸರ್ಕಾರಕ್ಕೆ ಇದರಿಂದ ಭಾರೀ ಹಿನ್ನಡೆಯಾಗಿದೆ.
SCROLL FOR NEXT