ಮುಂಬೈ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ತವರು ರಾಜ್ಯ ಗುಜರಾತ್ ನಲ್ಲಿ 150 ಮಿಷನ್ ಫ್ಲಾಪ್ ಆಗಿದೆ ಎಂದು ಶಿವಸೇನೆ ಲೇವಡಿ ಮಾಡಿದೆ.
ಶಿವಸೇನೆಯ ಸಾಮ್ನಾ ಮುಖಪುಟದಲ್ಲಿ ಬರೆದುಕೊಂಡಿದ್ದು ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಬಿಜೆಪಿ ಯಾವ ಮಟ್ಟಕ್ಕೆ ಬೇಕಾದರೂ ಹೋಗಬಹುದು. ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯ ನಿಜ ಬಣ್ಣ ಬಯಲಾಗಿದೆ ಎಂದು ಶಿವಸೇನೆ ಹೇಳಿದೆ.
ಗುಜರಾತ್ ನಲ್ಲಿ 150 ಮಿಷನ್ ಗುರಿ ಹೊಂದಿದ್ದ ಬಿಜೆಪಿ ಕೇವಲ 99 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿದೆ. 150 ಮಿಷನ್ ಗಾಗಿ ನಡೆಸಿದ ಕಸರತ್ತುಗಳೆಲ್ಲಾ ನೆಲಕಚ್ಚಿವೆ. ಇದು ಬಿಜೆಪಿಯ ಪತನವನ್ನು ಸೂಚಿಸುತ್ತಿದೆ ಎಂದು ಶಿವಸೇನೆ ವಾಗ್ದಾಳಿ ನಡೆಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಅಭಿಯಾನಕ್ಕೆ ಬಿಜೆಪಿಗೆ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಹೆಚ್ಚು ಮತಗಳು ಸಿಕ್ಕಿವೆ. ಪ್ರಧಾನ ಮೋದಿ ತಮ್ಮ ಪ್ರಚಾರ ವೇಳೆ ವಿಕಾಸ್(ಅಭಿವೃದ್ಧಿ) ಕುರಿತಾಗಿ ಮಾತನಾಡುತ್ತಾರೆ. ಬರೀ ನಗರ ಪ್ರದೇಶಗಳು ಅಭಿವೃದ್ಧಿ ಪತದಲ್ಲಿ ನಡೆಯುತ್ತಿದ್ದರೆ ಗ್ರಾಮೀಣ ಪ್ರದೇಶಗಳು ಮಾತ್ರ ಇನ್ನು ಹಿಂದೆ ಉಳಿದಿವೆ ಎಂಬುದನ್ನು ಮೋದಿ ಮರೆತಿದ್ದಾರೆ ಎಂದು ಶಿವಸೇನೆ ಕುಟುಕಿದೆ.
ಗುಜರಾತ್ ನಲ್ಲಿ ಕಳೆದ 22 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ರೈತಾಪಿ ಜನರ ಅಭಿವೃದ್ಧಿ ಕಡೆ ಗಮನವನ್ನು ಕೇಂದ್ರೀಕರಿಸುವಲ್ಲಿ ವಿಫಲವಾಗಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಗಣನೆಗೆ ತೆಗೆದುಕೊಂಡರೆ 2019ರ ಸಾರ್ವತ್ರಿಕ ಚುನಾವಣೆ ಕಾವು ಹೆಚ್ಚಾಗಲಿದೆ ಎಂದರು.