ನವದೆಹಲಿ: ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಭಾವಿ ಮಹಿಳೆ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗಲೂ ಕೂಡ ಕಾಂಗ್ರೆಸ್ ಪಕ್ಷ ದೇಶದ 18 ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿತ್ತು. ಆದರೆ ನಮ್ಮ ಅವಧಿಯಲ್ಲಿ 19 ರಾಜ್ಯಗಳಲ್ಲಿ ಬಿಜೆರಿ ಇಂದು ಸರ್ಕಾರ ನಡೆಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಪ್ರಕಟ ಬಳಿಕ ಇದೇ ಮೊದಲ ಬಾರಿಗೆ ನಡೆದಜ ಬಿಜೆಪಿ ಸಂಸದೀಯ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ, ಮೊದಲಿಗೆ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ಬಳಿಕ ಗೆದ್ದ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, ಇಂದಿರಾ ಗಾಂಧಿ ಅವಧಿಯಲ್ಲೇ ಕಾಂಗ್ರೆಸ್ ಪಕ್ಷ ಅತ್ಯಧಿಕ ಅಂದರೆ 18 ರಾಜ್ಯಗಳಲ್ಲಿ ಅಧಿಕಾರ ಹಿಡಿದಿತ್ತು. ಇದೀಗ ನಾವು ಅದನ್ನೂ ಮೀರಿದ ಸಾಧನೆ ಮಾಡಿದ್ದು, ನಮ್ಮ ಅವಧಿಯಲ್ಲಿ ಬಿಜೆಪಿ ಪಕ್ಷ 19 ರಾಜ್ಯಗಳಲ್ಲಿ ಸರ್ಕಾರ ನಡೆಸುತ್ತಿದೆ ಎಂದು ಹೇಳಿದರು.
ದೆಹಲಿಯ ಸಂಸತ್ ಭವನ ಗ್ರಂಥಾಲಯದಲ್ಲಿ ನಡೆದ ವಿಶೇಷ ಸಂಸದೀಯ ಸಭೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರಿಂದ ಗೌರವ ಸ್ವೀಕರಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಗೆಲುವು ಬಿಜೆಪಿ ಪಕ್ಷಕ್ಕೆ ಅತಿದೊಡ್ಡ ಗೆಲುವಾಗಿದೆ. ಈ ಗೆಲುವಿನೊಂದಿಗೆ ನಾವು 19 ರಾಜ್ಯಗಳಲ್ಲಿ ಅಧಿಕಾರ ಹಿಡಿದಂತಾಗಿದೆ. ಇಂದಿರಾ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ 18 ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿತ್ತು. ಇದೀಗ ನಾವು ಆದನ್ನೂ ಮೀರಿದ ಸಾಧನೆ ಮಾಡಿದ್ದು, 19 ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿದ್ದೇವೆ. 1984ರಲ್ಲಿ ಭಾರತೀಯ ಜನತಾ ಪಕ್ಷ ಕೇವಲ 2 ಸ್ಥಾನಗಳಲ್ಲಿ ಮಾತ್ರ ಜಯಿಸಿತ್ತು. ಅಂದಿನಿಂದ ಇಂದಿನವರೆಗೂ ಬಿಜೆಪಿಯಲ್ಲಿ ಮಹತ್ತರ ಬದಲಾವಣೆಗಳಾಗಿದೆ. 2 ಸ್ಥಾನಗಳಿಂದ ಆರಂಭಿಸಿದ ನಾವು ಇಂದು 19 ರಾಜ್ಯಗಳಲ್ಲಿ ಅಧಿಕಾರ ಹಿಡಿಯುವವರೆಗೂ ಸಾಗಿ ಬಂದಿದ್ದೇವೆ ಎಂದು ಹೇಳಿದರು.
ಈ ಹಿಂದೆ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ 99 ಸ್ಥಾನಗಳನ್ನು ಗಳಿಸಿ ಅಧಿಕಾರ ಹಿಡಿದಿದ್ದರೆ, ಅತ್ತ ಕಾಂಗ್ರೆಸ್ 80 ಸ್ಥಾನಗಳಿಗೆ ಮಾತ್ರ ತೃಪ್ತಿ ಪಟ್ಟುಕೊಂಡಿತ್ತು. ಇನ್ನು ಕಾಂಗ್ರೆಸ್ ಪಕ್ಷದ ವಶದಲ್ಲಿದ್ದ ಹಿಮಾಚಲ ಪ್ರದೇಶದಲ್ಲೂ ಬಿಜೆಪಿ ಮ್ಯಾಜಿಕ್ ಮಾಡಿ ಅಧಿಕಾರದ ಗದ್ದುಗೆ ಏರಿದೆ.