ಹೈದರಾಬಾದ್: ಪ್ರೀತಿ ನಿವೇದನೆ ನಿರಾಕರಿಸಿದ್ದ ಯುವತಿಯೊಬ್ಬಳ ಮೇಲೆ ತೀವ್ರವಾಗಿ ಕುಪಿತನಾಗಿದ್ದ ಭಗ್ನಪ್ರೇಮಿಯೊಬ್ಬ ನಡುರಸ್ತೆಯಲ್ಲಿಯೇ ಬೆಂಕಿ ಹಚ್ಚಿರುವ ಘಟನೆಯೊಂದು ಸಿಕಂದರಾಬಾದ್'ನ ಲಾಲಾಗೂಡದಲ್ಲಿ ನಡೆದಿದೆ.
ಸಂಧ್ಯಾರಾಣಿ (25) ಸಾವನ್ನಪ್ಪಿದ ಯುವತಿಯಾಗಿದ್ದಾಳೆ. ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಗುರುವಾರ ಸಂಜೆ ಸಂಧ್ಯಾ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿರುವ ದುಷ್ಕರ್ಮಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಯುವತಿಯ ಕೂಗಾಟ ಕೇಳಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ತೀವ್ರ ಗಾಯಗಳಿಂದ ನರಳುತ್ತಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಧ್ಯಾಳ ದೇಹದ ಶೇ.80ರಷ್ಟು ಚರ್ಮ ಸಂಪೂರ್ಣ ಸುಟ್ಟು ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದೆ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾಳೆಂದು ತಿಳಿದುಬಂದಿದೆ.
ಮೃತ ಯುವತಿಯ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಉತ್ತರ ವಿಭಾಗದ ಡಿಸಿಪಿ ಬಿ.ಸುಮತಿಯವರು ಹೇಳಿದ್ದಾರೆ.
ಪ್ರೀತಿ ಹೆಸರಿನಲ್ಲಿ ಕಾರ್ತಿಕ್ ನನಗೆ ಹಿಂಸೆ ನೀಡುತ್ತಿದ್ದ. ಗುರುವಾರ ಕಾರ್ತಿಕೆ ನನ್ನ ಬಳಿ ತನ್ನ ಪ್ರೀತಿಯ ನಿವೇದನೆಯನ್ನು ಇಟ್ಟಿದ್ದ. ಇದಕ್ಕೆ ನಾನು ನಿರಾಕರಿಸಿದ್ದೆ. ಬಳಿಕ ನನ್ನನ್ನು ಕಾರ್ತಿಕ್ ಹಿಂಬಾಲಿಸುತ್ತಿದ್ದ. ಇದ್ದಕ್ಕಿದ್ದಂತೆಯೇ ಸೀಮೆಎಣ್ಣೆಯನ್ನು ನನ್ನ ಮೇಲೆ ಸುರಿದು ಬೆಂಕಿ ಹಚ್ಚಿದ ಎಂದು ಯುವತಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುವತಿಯ ಕುಟುಂಬ ಸದಸ್ಯರು ಹೇಳಿಕೆ ನೀಡಿದ್ದು, ಕೆಲ ತಿಂಗಳಿನಿಂದ ಕಾರ್ತಿಕೆ ಸಂಧ್ಯಾಳಿಗೆ ಕಿರಿಕುಳ ನೀಡುತ್ತಿದ್ದ. ಇದರಿಂದಾಗಿ ತನ್ನ ದುರ್ನಡತೆಯನ್ನು ಸರಿಪಡಿಸಿಕೊಳ್ಳುವಂತೆ ಕಾರ್ತಿಕ್'ಗೆ ಎಚ್ಚರಿಕೆ ನೀಡಿದ್ದೆವು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics