ನವದೆಹಲಿ: ಜೆರುಸಲೇಮ್ ನ್ನು ಇಸ್ರೇಲ್ ರಾಜಧಾನಿಯನ್ನಾಗಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆ ಪ್ಯಾನ್ ಇಸ್ಲಾಮ್, ಇಸ್ಲಾಮಿಕ್ ಬ್ರದರ್ ಹುಡ್ ನ್ನು ಮತ್ತೊಮ್ಮೆ ಜಾಗೃತಗೊಳಿಸಿದೆ.
ಜೆರುಸಲೇಮ್ ನ್ನು ಇಸ್ರೇಲ್ ನ ರಾಜಧಾನಿಯನ್ನಾಗಿಸಬೇಕೆಂಬ ಟ್ರಂಪ್ ಹೇಳಿಕೆಗೆ ಇಂಡಿಯನ್ ಸಬ್ ಕಾಂಟಿನೆಂಟ್ ನ ಅಲ್-ಖೈದಾ ಉಗ್ರ ಸಂಘಟನೆ (ಎಕ್ಯೂಐಎಸ್) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಮೆರಿಕ, ಇಸ್ರೇಲ್ ನ ರಾಯಭಾರ ಕಚೇರಿಗಳು, ಸಂಸ್ಥೆಗಳು, ಉದ್ಯಮ ಸಮೂಹಗಳ ಮೇಲೆ ದಾಳಿ ನಡೆಸುವಂತೆ ಕರೆ ನೀಡಿದೆ.
ಎಕ್ಯೂಐಎಸ್ ದಕ್ಷಿಣ ಕಾಶ್ಮೀರ, ದೆಹಲಿ, ಕೋಲ್ಕತಾದಲ್ಲಿ ಸಕ್ರಿಯವಾಗಿದ್ದು, ಜಮ್ಮು-ಕಾಶ್ಮೀರದಲ್ಲಿ ಅನ್ಸರ್ ಘಜ್ವಾತ್-ಉಲ್-ಹಿಂದ್ ಎಂಬ ಸಂಘಟನೆ ಹೆಸರಿನಲ್ಲಿ ಅಮೆರಿಕ ಸಂಸ್ಥೆಗಳ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕಿದ್ದು ಅಮೆರಿಕ ಹಾಗೂ ಇಸ್ರೇಲ್ ಗೆ ಸೇರಿದ ಸಂಸ್ಥೆಗಳು, ಹಣಕಾಸು, ವಾಣಿಜ್ಯ ಕಂಪನಿಗಳ ಮೇಲೆ ದಾಳಿ ನಡೆಸುವಂತೆ ಮುಸ್ಲಿಮರಿಗೆ ಕರೆ ನೀಡಿದೆ. ಅಷ್ಟೇ ಅಲ್ಲದೇ ಅಮೆರಿಕಾ ಹಾಗೂ ಇಸ್ರೇಲಿಗಳ ರಕ್ತಪಾತವಾದರೆ ಬೇಟ್ ಅಲ್-ಮಕ್ಡಿಸ್ ನ ಗೌರವವನ್ನು ಪುನಃ ಪ್ರತಿಷ್ಠಾಪಿಸಿದಂತಾಗುತ್ತದೆ, ಈ ರೀತಿ ಮಾಡುವುದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯ ಎಂದು ಭಾರತದ ಅಲ್-ಖೈದಾ ಶಾಖೆ ಹೇಳಿದೆ. ಜೆರುಸಲೇಮ್ ನಲ್ಲಿರುವ ಮುಸ್ಲಿಮರ ಪವಿತ್ರ ನೆಲವನ್ನು ಜ್ಯೂಗಳ ಸ್ಮಶಾನ ಮಾಡಬೇಕು ಎಂದು ಹೇಳುವ ಮೂಲಕ ಎಕ್ಯೂಐಎಸ್ ಇಸ್ಲಾಮಿಕ್ ಉಗ್ರ ಸಂಘಟನೆ ಅಮೆರಿಕ ಹಾಗೂ ಇಸ್ರೇಲಿಗಳಿಗೆ ಬೆದರಿಕೆ ಹಾಕಿದೆ.