ಮಾಧ್ಯಮಗಳಲ್ಲಿ ಐಟಂ ಸಾಂಗ್ ವಿರುದ್ಧ ಆಕ್ರೋಶಭರಿತವಾಗಿ ಮಾತನಾಡುತ್ತಿದ್ದ ನಟ ಹುಚ್ಚ ವೆಂಕಟ್ ಮೇಲೆ ಯುವಕನೋರ್ವ ಹಲ್ಲೆ ಮಾಡಿದ್ದ ವಿಡಿಯೋ ಇದೇ ಡಿಸೆಂಬರ್ ನಲ್ಲಿ ವೈರಲ್ ಆಗಿತ್ತು. ಯಶವಂತಪುರದಲ್ಲಿ ಊಟ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ನಟ ವೆಂಕಟ್ ರನ್ನು ತಡೆದು ರೇಗಿಸಿ ಬಳಿಕ ಹೆಲ್ಮೆಟ್ ನಿಂದ ಭಾರಿಸಿದ್ದ. ಈ ವಿಡಿಯೋ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವೆಂಕಟ್, ಯಾವುದೋ ಒಂದು ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮಿಬ್ಬರ ನಡುವೆ ಗಲಾಟೆ ಶುರುವಾಯ್ತು. ಅವರು ಕುಡಿದಿದ್ದರು. ಆ ಬಳಿಕ ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದೇವೆ ಎಂದು ಹೇಳಿದ್ದರು.
ಆಹಾರವನ್ನು ಅರಸಿ ಕಾಡಿನಿಂದ ತನ್ನ ಮರಿ ಸಮೇತ ಕೊಯಮತ್ತೂರಿಗೆ ಬಂದಿದ್ದ ಆನೆಯೊಂದು ಅಲ್ಲಿನ ಮನೆಯೊಳಗೆ ನುಗ್ಗಿತ್ತು. ಆದರೆ ಆಹಾರ ಸಿಗದೇ ಮನೆಯಲ್ಲಿ ಯಾವುದೇ ರೀತಿಯ ಹಾನಿ ಮಾಡದೇ ವಾಪಸ್ ಆಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಬೆಂಕಿಗಾಹುತಿಯಾಗಿದ್ದ ಬಹುಮಹಡಿ ಕಟ್ಟಡದಲ್ಲಿ ವ್ಯಕ್ತಿಯೋರ್ವ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚೀನಾದ ಚಾಂಗ್ ಜಿಂಗ್ ನಲ್ಲಿ ನಡೆದಿತ್ತು. ತಾನಿರುವ ಕೊಠಡಿಯ ಮೇಲೆಯೇ ಭಾರಿ ಪ್ರಮಾಣದಲ್ಲಿ ಕಟ್ಟಡಕ್ಕೆ ಬೆಂಕಿ ಹೊತ್ತಿದ್ದು, ಆತ ಕಿಟಕಿ ಮೇಲೆ ನೇತಾಡುತ್ತಿದ್ದರೆ ಅತ್ತ ಮೇಲಿನಿಂದ ಬೆಂಕಿಯ ಅವಶೇಷಗಳು ಕೆಳಗೆ ಬೀಳುತ್ತಿವೆ. ಕೆಲ ಅವಶೇಷಗಳು ಆತನ ಮೇಲೆಯೇ ಬಿದ್ದರೂ ಅದರಿಂದ ಹೇಗೋ ಆತ ಪಾರಾಗಿದ್ದ. ಕೊನೆಗೆ ಕಿಟಕಿ ಕನ್ನಡಿ ಒಡೆದು ಒಳಗೆ ಹೋಗುವ ಪ್ರಯತ್ನ ಮಾಡಿದನಾದರೂ ಒಂದಷ್ಟು ಸಮಯ ಅದು ಫಲನೀಡಲಿಲ್ಲ. ಅಂತಿಮವಾಗಿ ಆತನ ನೆರವಿಗೆ ಧಾವಿಸಿದ ಕೆಲವರು ಬಹುಮಹಡಿ ಕಟ್ಟಡದೊಳಗೆ ನುಗ್ಗಿ ಆತನಿಂದ ಕೊಠಡಿಯ ಕಿಟಕಿಯ ಗಾಜನ್ನು ಒಳಗಿನಿಂದ ಒಡೆದು ಆತನನ್ನು ಒಳಗೆ ಎಳೆದುಕೊಂಡಿದ್ದರು.
ಬಾಹುಬಲಿ-2 ಚಿತ್ರದಲ್ಲಿ ನಟ ಪ್ರಭಾಸ್ ಆನೆ ಮೇಲೆ ಏರುವ ದೃಶ್ಯದಲ್ಲಿರುವಂತೇಯೇ ಕೇರಳದ ಓರ್ವ ಯುವಕ ಮಾಡಲು ಹೋಗಿ ಆನೆಯಿಂದ ಬೆನ್ನುಮೂಳೆ ಮುರಿಸಿಕೊಂಡು ಆಸ್ಪತ್ರೆಗೆ ಸೇರುವಂತಾಗಿತ್ತು. ಬಾಹುಬಲಿ ಸಿನಿಮಾದಂತೆ ಯುವಕ ಸೊಂಡಿಲು ಮೂಲಕ ಆನೆ ಮೇಲೆ ಹತ್ತಲು ಹೋದ ವೇಳೆ ಆನೆ ಆತನನ್ನು ಅದೇ ಸೊಂಡಿಲಿನ ಮೂಲಕ ದೂರಕ್ಕೆ ಬಿಸಾಕಿದೆ. ಇದರಿಂದ ಯುವಕ ದೂರ ಹೋಗಿ ಬಿದ್ದಿದ್ದು, ಆತನ ಬೆನ್ನುಮೂಳೆ ಮುರಿದಿತ್ತು.
ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ತಮ್ಮ ಸಹಾಯಕನಿಗೆ ಶೂ ಲೇಸ್ ಸರಿಯಾಗಿ ಕಟ್ಟುವಂತೆ ಸಹಾಯಕನಿಗೆ ಥಳಿಸಿದ್ದ ವಿಡಿಯೋ ವೈರಲ್ ಆಗಿತ್ತು. ಬಾಲಕೃಷ್ಣ ಅಭಿನಯದ 102ನೇ ಚಿತ್ರದ ಶೂಟಿಂಗ್ ವೇಳೆ ಸಹಾಯಕನಿಗೆ ಶೂ ಲೇಸ್ ಸರಿಯಾಗಿ ಕಟ್ಟುವಂತೆ ಥಳಿಸಿದ್ದರು. ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಇದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದರು.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಶಿಕಲಾ ನಟರಾಜನ್ ಮತ್ತು ಇಳವರಸಿ ಜೈಲಿನ ಸಮವಸ್ತ್ರ ಧರಿಸದೆ ಸ್ವಚ್ಛಂದವಾಗಿ ಓಡಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು, ಪರಪ್ಪನ ಅಗ್ರಹಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳೇ ಆರೋಪಿಸಿದ್ದ ಸಂದರ್ಭದಲ್ಲಿ ಈ ವಿಡಿಯೋ ಬಹಿರಂಗವಾಗಿತ್ತು. ಈ ವಿಡಿಯೋದಲ್ಲಿ ಶಶಿಕಲಾ ರೇಷ್ಮೆ ಚೂಡಿದಾರ್ ಧರಿಸಿ ಫ್ಯಾನ್ಸಿ ಬ್ಯಾಗ್ ಹಿಡಿದು ಓಡಾಡುತ್ತಿದ್ದು ಅವರ ಹಿಂದೆಯೇ ಮತ್ತೊಬ್ಬ ಆರೋಪಿ ಇಳವರಸಿ ಜೈಲಿನ ಸಮವಸ್ತ್ರ ಧರಿಸದೆ ಓಡಾಡುತ್ತಿದ್ದರು.
ನಮ್ಮ ಕಾಶ್ಮೀರದಲ್ಲಿ ಇರುವಂತೆಯೇ ಇಸ್ರೇಲ್ ನಲ್ಲೂ ಕೂಡ ಭಯೋತ್ಪಾದಕರೊಂದಿಗೆ ಸ್ಥಳೀಯ ಕಲ್ಲು ತೂರಾಟಗಾರರ ಸಮಸ್ಯೆ ಸೈನಿಕರನ್ನು ಪೀಡಿಸುತ್ತಿದ್ದು, ಇಂತಹ ಕಲ್ಲು ತೂರಾಟಗಾರರ ಸಮಸ್ಯೆಗೆ ಇಸ್ರೇಲ್ ಸೈನಿಕರು ಕಂಡುಕೊಂಡ ಮಾರ್ಗ ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಸೈನಿಕರತ್ತ ಕಲ್ಲು ತೂರುವ ಕಲ್ಲು ತೂರಾಟಗಾರರ ನಡುವೆ ಇಸ್ರೇಲ್ ಸೈನಿಕರು ತಾವೇ ಕಲ್ಲು ತೂರುವವರಂತೆ ವೇಷ ತೂಟ್ಟು ಅವರ ಜೂತೆ ಸೇರಿಕೂಂಡು ಅವರ ನಾಯಕನನ್ನು ಹಿಡಿಯುತ್ತಾರೆ. ಕಲ್ಲು ತೂರಾಟಗಾರರ ನಾಯಕ ಸೈನಿಕರಿಂದ ಬಂಧನಕ್ಕೊಳಪಡುತ್ತಿದ್ದಂತೆಯೇ ಅಲ್ಲಿನ ಕಲ್ಲು ತೂರಾಟಗಾರರ ಗುಂಪು ಅಲ್ಲಿಂದ ಬೆದರಿ ಪರಾರಿಯಾಗುತ್ತದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
3 ತಿಂಗಳ ಹಾಲುಕಂದಮ್ಮ ತನ್ನ ಅಮ್ಮನಿಗೆ ಐ ಲವ್ ಯೂ ಹೇಳಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸ್ಕಾಟ್ ಲ್ಯಾಂಡ್ ನ ಗ್ಲಾಸ್ಗೋವ್ ನಗರದ ನಿವಾಸಿಗಳಾದ ಕ್ಲೇರ್ ರೀಡ್ (28 ವರ್ಷ )ಮತ್ತು ಗ್ರಾಂಟ್ ರೀಡ್ (32 ವರ್ಷ) ದಂಪತಿಯ 13 ವಾರಗಳ ಹೆಣ್ಮು ಮಗು ತನ್ನ ತಾಯಿ ಐ ಲವ್ ಯೂ ಹೇಳಿದಾಗ ತಾನು ಕೂಡ ಐ ಲವ್ ಯೂ ಎಂದು ಹೇಳಿದ್ದಾಳೆ. ಈ ವಿಡಿಯೋವನ್ನು ಸಂಬಂಧಿಕರೊಬ್ಬರು ಚಿತ್ರೀಕರಿಸಿದ್ದು, ಕೂಡಲೇ ತಾಯಿ ಕ್ಲೇರ್ ರೀಡ್ ಗೆ ಫೋನಾಯಿಸಿ ವಿಚಾರ ತಿಳಿಸಿದ್ದಾಳೆ. ಆದರೆ ಪತಿ ಗ್ರಾಂಟ್ ರೀಡ್ ಮೊದಲು ಅದನ್ನು ನಂಬಲಿಲ್ಲ. ಬಳಿಕ ಕ್ಲೇರ್ ಅದನ್ನು ವಾಟ್ಸಪ್ ಮೂಲಕ ತನ್ನ ಪತಿಗೆ ಕಳುಹಿಸಿದ್ದಾಳೆ. ವಿಡಿಯೋ ನೋಡಿದ ಗ್ರಾಂಟ್ ನಿಜಕ್ಕೂ ಅಚ್ಚರಿಗೆ ಒಳಗಾಗಿದ್ದು, ತನ್ನ ಪುಟ್ಟ ಮಗಳು ತನ್ನ ತಾಯಿಗೆ ಐ ಲವ್ ಯೂ ಹೇಳಿರುವುದನ್ನು ನೋಡಿ ಅಶ್ಚರ್ಯಗೊಂಡಿದ್ದ.
ಜೋಡಿಯೊಂದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದ ಸೆಲ್ಫಿಯೊಂದು ವ್ಯಾಪಕ ವೈರಲ್ ಆಗಿತ್ತು. ಸುಂದರ ಸೆಲ್ಪಿ ಹಿಂದಿನ ರೋಚಕ ಭಯಾನಕತೆಯಿಂದಾಗಿ ಈ ಫೋಟೋ ವೈರಲ್ ಆಗಿತ್ತು. ಆ್ಯಂಡಿ ಎಂಬ ಟ್ವಿಟರ್ ಖಾತೆದಾರ ಈ ಫೋಟೋವನ್ನು ಆಪ್ಲೋಡ್ ಮಾಡಿದ್ದು, ಐ ಲವ್ ಮೈ ಗರ್ಲ್ ಫ್ರೆಂಡ್ ಈವನ್ ಶೀ ಇಸ್ ಜೆಮಿನಿ ("I love my girlfriend even if she's a Gemini") ಎಂದು ಟ್ವೀಟ್ ಮಾಡಿದ್ದ. ಆದರೆ ಮೇಲ್ನೋಟಕ್ಕೆ ಈ ಫೋಟೋ ಜೋಡಿಯ ಪ್ರೀತಿಯನ್ನು ತೋರಿಸುತ್ತದೆಯಾದರೂ, ಇದೇ ಫೋಟವನ್ನು ಕೊಂಚ ಕೂಲಂಕುಷವಾಗಿ ಪರಿಶೀಲಿಸಿದರೆ ಫೋಟೋ ಹಿಂದಿನ ಭಯಾನಕತೆ ಬಯಲಾಗುತ್ತದೆ. ಫೋಟೋಗೆ ಫೋಸ್ ಕೊಡುವ ಯುವತಿ ಏಕಕಾಲದಲ್ಲಿ ಎರಡೆರಡು ದಿಕ್ಕಿಗೆ ಮುಖ ತೋರಿಸಿದ್ದಾಳೆ. ಸೆಲ್ಫಿ ವೇಳೆ ಯುವತಿ ಯಾವುದಾದರೂ ಒಂದೇ ದಿಕ್ಕಿಗೆ ನೋಡಬೇಕಿತ್ತು. ಆದರೆ ಇವರ ಹಿಂದಿದ್ದ ಕನ್ನಡಿಯಲ್ಲಿ ಯುವತಿ ಅದೇ ಕ್ಷಣದಲ್ಲಿ ಹಿಂಬದಿಗೆ ನೋಡುವುದೂ ಕಾಣುತ್ತದೆ. ಓರ್ವ ವ್ಯಕ್ತಿಗೆ ಎರಡು ಮುಖಗಳಿರಲು ಸಾಧ್ಯವಿಲ್ಲ. ಇನ್ನು ಫೋಟೋ ನೋಡಿದರೆ ಆಕೆ ಸೆಲ್ಫೀಗೆ ಫೋಸ್ ನೀಡಿರುವುದು ಸ್ಪಷ್ಟವಾಗುತ್ತದೆ. ಆದರೆ ಆದೇ ಸಂದರ್ಭದಲ್ಲಿ ಆ ಕನ್ನಡಿಯಲ್ಲಿ ಕಾಣುತ್ತಿರುವುದೇನು ಎಂಬ ಪ್ರಶ್ನೆಯೂ ಮೂಡುತ್ತದೆ.
ಉತ್ತರಾಖಂಡ ರಾಜ್ಯದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಉತ್ತರಾಖಂಡದ ಇತರೆ ರಾಜಕೀಯ ಮುಖಂಡರನ್ನು ಬಳಕೆ ಮಾಡಿ ಅಭಿಮಾನಿಗಳು ತಯಾರಿಸಿರುವ ಈ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡಿತ್ತು. ಬಾಹುಬಲಿ ಚಿತ್ರದಲ್ಲಿ ನಟ ಪ್ರಭಾಸ್ ಶಿವಲಿಂಗವನ್ನು ಹೊತ್ತು ಸಾಗಿದರೆ, ಒಂದೂವರೆ ನಿಮಿಷದ ಈ ವಿಡಿಯೋ ತುಣುಕಿನಲ್ಲಿ ಸಿಎಂ ಹರೀಶ್ ರಾವತ್ ಅವರು ಉತ್ತರಾಖಂಡ ರಾಜ್ಯದ ಜವಾಬ್ದಾರಿಯನ್ನು ತಮ್ಮ ಭುಜದ ಮೇಲೆ ಹಾಕಿಕೊಂಡು ರಾಜ್ಯವನ್ನು ರಕ್ಷಿಸಿ ಹೊತ್ತು ಸಾಗುತ್ತಿರುವಂತೆ ಮತ್ತು ಅದನ್ನು ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ವಿಜಯ್ ಬಹುಗುಣ ಅವರು ಆಶ್ಚರ್ಯದಿಂದ ವೀಕ್ಷಿಸುತ್ತಿರುವಂತೆ ಗ್ರಾಫಿಕ್ಸ್ ಮಾಡಲಾಗಿತ್ತು.
ಜಲ್ಲಿಕಟ್ಟು ವಿವಾದ ಸಂಬಂಧ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆದಿದ್ದ ಹಿಂಸಾಚಾರದ ವೇಳೆ ಪೊಲೀಸರೇ ವಾಹನಗಳಿಗೆ ಬೆಂಕಿ ಹಚ್ಚಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಜಲ್ಲಿಕಟ್ಟು ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪೊಲೀಸರು ಮುಂದಾಗಿದ್ದರಿಂದ ಚೆನ್ನೈನ ಮರೀನಾ ಬೀಚ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಕ್ರಮೇಣ ಹಿಂಸಾಚಾರ ಇಡೀ ಚೆನ್ನೈ ನಗರಕ್ಕೆ ಆವರಿಸಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ ಮಟ್ಟಿಗೆ ವ್ಯಾಪಕ ಹಿಂಸಾಚಾರ ನಡೆದಿತ್ತು. ಈ ವೇಳೆ ರಕ್ಷಣೆ ಕೊಡಬೇಕಿದ್ದ ಪೊಲೀಸರೇ ವಾಹನಗಳಿಗೆ ಬೆಂಕಿ ಇಡುವ ಮೂಲಕ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದರು. ಪೊಲೀಸರು ವಾಹನಗಳಿಗೆ ಬೆಂಕಿ ಇಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಜೈಲಿನಲ್ಲಿರುವ ಕೈದಿಗಳಿಗೆ ಪೊಲೀಸ್ ಅಧಿಕಾರಿಗಳು ಲಂಚ ಪಡೆದು ವಿಶೇಷ ಸವಲತ್ತುಗಳನ್ನು ನೀಡುತ್ತಿದ್ದಾರೆ ಎಂಬ ಆರೋಪ ಇತ್ತೀಚೆಗೆ ಕರ್ನಾಟಕದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಈ ಸುದ್ದಿ ಮರೆಯಾಗುವ ಮುನ್ನವೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಜೈಲಿನಲ್ಲಿರುವ ಕೈದಿಗಳಿಗೆ ಹಣ ಹೇಗೆ ಕಳ್ಳ ಸಾಗಣೆಯಾಗುತ್ತದೆ ಎಂಬ ಅಡಿ ಬರಹದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಫೇಸ್ ಬುಕ್ ನಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಗಂಗಾಧರ್ ಹೊನ್ನಳ್ಳಿ ಎಂಬ ಖಾತೆದಾರರು ಈ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದರು. ಜೈಲು ಕೈದಿಗಳಿಗೆ ತಂದುಕೊಡುವ ಬಾಳೆಹಣ್ಣಿನಲ್ಲಿ ಹಣವನ್ನು ಬಚ್ಚಿಟ್ಟು ಹೇಗೆ ಜೈಲಿನೊಳಗಿರುವ ಕೈದಿಗಳಿಗೆ ರವಾನೆ ಮಾಡಲಾಗುತ್ತದೆ ಎಂಬುದನ್ನು ಈ ವಿಡಿಯೋದಲ್ಲಿ ವಿವರಿಸಲಾಗಿತ್ತು.