ಚೆನ್ನೈ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ವಿರುದ್ಧ ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಬಂಡಾಯವೆದ್ದಿರುವುದರಿಂದ ತಮಿಳುನಾಡು ರಾಜಕೀಯದಲ್ಲಿ ಬಿಕ್ಕಟ್ಟು ಎದುರಾಗಿದ್ದು, ಕೂಡಲೇ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸುವಂತೆ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಗೆ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಬುಧವಾರ ಮನವಿ ಮಾಡಿದ್ದಾರೆ.
ರಾಜಕೀಯ ಬಿಕ್ಕಟ್ಟು ಕುರಿತಂದೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸ್ಟಾಲಿನ್ ಅವರು, ಕಳೆದ 8 ತಿಂಗಳಿನಿಂದ ತಮಿಳುನಾಡು ಸರ್ಕಾರದ ಆಡಳಿತ ಕುಸಿದುಬದ್ದಿದೆ. ತಮಿಳುನಾಡು ರಾಜ್ಯದ ಹಿತಾಸಕ್ತಿ ಹಿನ್ನಲೆಯಲ್ಲಿ ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶ ಮಾಡಿ, ಸಮಸ್ಯೆ ಬಗೆಹರಿಸಬೇಕಿದೆ ಎಂದು ಹೇಳಿದ್ದಾರೆ.
ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಟಾಲಿನ್ ಅವರನ್ನು ನೋಡಿ ಪನ್ನೀರ್ ಸೆಲ್ವಂ ಅವರು ನಗುತ್ತಿದ್ದರು ಎಂಬ ಶಶಿಕಲಾ ಅವರ ಹೇಳಿಕೆ ವಿರುದ್ದ ಕಿಡಿಕಾರಿರುವ ಅವರು, ಜಯಲಲಿತಾ ಅವರು ಇದ್ದ ಸಂದರ್ಭದಲ್ಲಿ ವಿಧಾನಮಂಡಲದಲ್ಲಿ ನನ್ನನ್ನು ನೋಡಿ ನಗುತ್ತಲೇ ನನ್ನನ್ನು ಅಭಿನಂದಿಸಿದ್ದರು. ಇದನ್ನು ಶಶಿಕಲಾ ಅವರು ಪ್ರಶ್ನೆ ಮಾಡುವರೇ? ನಗುವುದೂ ಕೂಡ ಆಕ್ಷೇಪಾರ್ಹ ಎಂದು ಹೇಳುತ್ತಿರುವ ಶಶಿಕಲಾ ಅವರಿಗೆ ನಾಚಿಕೆಯಾಗಬೇಕು. ಶಶಿಕಲಾ ಅವರನ್ನು ನೋಡಿ ಈಡೀ ಜನತೆಯೇ ನಗುತ್ತಿದೆ. ಇದೀಗ ಆವರು ಏನು ಹೇಳುತ್ತಾರೆ ಎಂದು ತಿಳಿಸಿದ್ದಾರೆ.