ನವದೆಹಲಿ: ದೇಶದ ಗ್ರಾಮೀಣ ಪ್ರದೇಶಗಳ 6 ಕೋಟಿ ಕುಟುಂಬಗಳು ಡಿಜಿಟಲ್ ಸಾಕ್ಷರತೆ ಪಡೆಯಲು ಕೇಂದ್ರ ಸಂಪುಟ ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸುರಕ್ಷಾ ಅಭಿಯಾನಕ್ಕೆ(ಪಿಎಂಜಿಡಿಐಎಸ್ಎಚ್ಎ) ಅನುಮೋದನೆ ನೀಡಿದೆ.
ಈ ಯೋಜನೆಗೆ ಸುಮಾರು 2,351.38 ಕೋಟಿ ರೂಪಾಯಿ ವೆಚ್ಚ ತಗುಲಲಿದ್ದು 2019ರ ಮಾರ್ಚ್ ವೇಳೆಗೆ ಗ್ರಾಮೀಣ ಭಾರತವನ್ನು ಡಿಜಿಟಲ್ ಸಾಕ್ಷರ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.2016-17ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಈ ಬಗ್ಗೆ ಘೋಷಣೆ ಮಾಡಿದ್ದರು.
ಯೋಜನೆಯಡಿ, 25 ಲಕ್ಷ ಅಭ್ಯರ್ಥಿಗಳಿಗೆ 2016-17ನೇ ಸಾಲಿನ ಹಣಕಾಸು ವರ್ಷದಲ್ಲಿ, 275 ಲಕ್ಷ ಅಭ್ಯರ್ಥಿಗಳಿಗೆ 2017-18ರಲ್ಲಿ ಮತ್ತು 300 ಲಕ್ಷ ಅಭ್ಯರ್ಥಿಗಳಿಗೆ 2018-19ರಲ್ಲಿ ತರಬೇತಿ ನೀಡಲಾಗುತ್ತದೆ.
ಭಾರತದ ಎಲ್ಲಾ ಹಳ್ಳಿಗಳಿಗೂ ಡಿಜಿಟಲ್ ಸಾಕ್ಷರತೆ ತಲುಪಲು 2,50,000 ಗ್ರಾಮ ಪಂಚಾಯತಿಗಳಲ್ಲಿ ಸುಮಾರು 200ರಿಂದ 300 ಅಭ್ಯರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ.
ಡಿಜಿಟಲ್ ಸಾಕ್ಷರತೆ ಹೊಂದಿರುವ ಜನರು ಕಂಪ್ಯೂಟರ್, ಟಾಬ್ಲೆಟ್, ಸ್ಮಾರ್ಟ್ ಫೋನ್ ಗಳನ್ನು ಬಳಸಬಹುದಾಗಿದೆ. ಇಮೇಲ್ ಸ್ವೀಕರಿಸುವುದು, ಇಂಟರ್ನೆಟ್ ಹುಡುಕಾಟ, ಸರ್ಕಾರಿ ಸೇವೆಗಳನ್ನು ಪಡೆಯುವುದು, ಮಾಹಿತಿಗಳ ಹುಡುಕಾಟ, ನಗದುರಹಿತ ವಹಿವಾಟುಗಳು ಮೊದಲಾದವು ಡಿಜಿಟಲ್ ವಹಿವಾಟಿನಡಿ ಬರುತ್ತದೆ. ದೇಶದ ಪ್ರತಿ ನಾಗರಿಕರೂ ಕಂಪ್ಯೂಟರ್, ಇಂಟರ್ನೆಟ್ ನ್ನು ಸಕ್ರಿಯವಾಗಿ ಬಳಸಿದರೆ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂಬ ಯೋಚನೆ ಕೇಂದ್ರ ಸರ್ಕಾರದ್ದು.
ಈ ಯೋಜನೆಯನ್ನು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಇಲಾಖೆ ನಿರ್ವಹಿಸುತ್ತದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆಗಳ ಜಾರಿ ಸಂಸ್ಥೆಗಳು, ಜಿಲ್ಲಾ ಇ-ಆಡಳಿತ ಸೊಸೈಟಿಗಳು ಕೂಡ ನೆರವಾಗುತ್ತವೆ.
2014ರ ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ(ಎನ್ಎಸ್ಎಸ್ಒ)ದ 71ನೇ ಸಮೀಕ್ಷೆ ಪ್ರಕಾರ, ಕೇವಲ ಶೇಕಡಾ 6ರಷ್ಟು ಮಾತ್ರ ಗ್ರಾಮೀಣ ಪ್ರದೇಶಗಳ ಜನರು ಕಂಪ್ಯೂಟರ್ ಹೊಂದಿದ್ದಾರೆ. 15 ಕೋಟಿಗೂ ಅಧಿಕ ಗ್ರಾಮೀಣ ಕುಟುಂಬಗಳಲ್ಲಿ ಕಂಪ್ಯೂಟರ್ ಇಲ್ಲ ಮತ್ತು ಡಿಜಿಟಲ್ ಅನಕ್ಷರಸ್ಥರಾಗಿದ್ದಾರೆ.
ಪಿಎಂಜಿಡಿಐಎಸ್ಎಚ್ಎ ಹಳ್ಳಿಯ ನಾಗರಿಕರು ಕಂಪ್ಯೂಟರ್ ನಿರ್ವಹಣೆ ಬಗ್ಗೆ ಮಾಹಿತಿ, ಜ್ಞಾನ ಮತ್ತು ಕೌಶಲ್ಯತೆ ಬೆಳೆಸಿಕೊಳ್ಳಲು ಹಾಗೂ ಡಿಜಿಟಲ್ ಸಾಧನಗಳನ್ನು ಬಳಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತದೆ.