ಚೆನ್ನೈ: ಅಧಿಕಾರಕ್ಕಾಗಿ ಶಶಿಕಲಾ ನಟರಾಜನ್ ಅವರು ಕೊಳಕು ರಾಜಕೀಯ ಮಾಡುತ್ತಿದ್ದು, ತನ್ನನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡುವಂತೆ ಸಚಿವರ ಮೇಲೆ ಹೇರುತ್ತಿದ್ದಾರೆಂದು ತಮಿಳುನಾಡು ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಗುರುವಾರ ಆರೋಪಿಸಿದ್ದಾರೆ.
ಚೆನ್ನೈನಲ್ಲಿ ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾಡನಾಡಿದ ಪನ್ನೀರ್ ಸೆಲ್ವಂ ಅವರು, ಶಶಿಕಲಾ ನಟರಾಜನ್ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದರು. "ಮುಖ್ಯಮಂತ್ರಿಯಾಗುವ ಹಂಬಲದಲ್ಲಿರುವ ಶಶಿಕಲಾ ಅತ್ಯಂತ ಕೀಳುಮಟ್ಟದ ರಾಜಕೀಯವನ್ನು ಮಾಡುತ್ತಿದ್ದಾರೆ. ಶಾಸಕರ ಮತ್ತು ಸಚಿವರ ಸಭೆ ನಡೆಸಿ ತನ್ನನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡುವಂತೆ ಸಚಿವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಒಂದು ವೇಳೆ ಈ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದೇ ಆದರೆ, ಪ್ರಜಾಪ್ರಭುತ್ವದ ಕಗ್ಗೊಲೆಯಾದಂತೆ ಎಂದು ಅವರು ಕಿಡಿಕಾರಿದರು.
ಜಯಲಲಿತಾ ಬಳಿಕ ಶಶಿಕಲಾ ಅವರನ್ನೇ ಮುಖ್ಯಮಂತ್ರಿ ಮಾಡಬೇಕೆಂದು ಶಶಿಕಲಾ ಬೆಂಬಲಿಗರು ಬಯಸಿದ್ದರು. ಅಮ್ಮ ನಿಧನ ಹೊಂದಿದ ಬಳಿಕ ಮಧುಸೂದನ್ ಅವರನ್ನು ಪ್ರಧಾನ ಕಾರ್ಯದರ್ಶಿ ಮಾಡುತ್ತೇವೆಂದು ಹೇಳಿದ ಬಳಿಕವಷ್ಟೇ ನಾನು ಮುಖ್ಯಮಂತ್ರಿಯಾಗಲು ಒಪ್ಪಿಗೆ ಸೂಚಿಸಿದ್ದೆ. ಕಾರ್ಯದರ್ಶಿ ಸ್ಥಾನ ಒಪ್ಪಿಕೊಳ್ಳದಂತೆ ಶಶಿಕಲಾ ಮತ್ತು ಅವರ ಬೆಂಬಲಿಗರು ಮಧುಸೂದನ್ ಅವರ ಮೇಲೆ ಒತ್ತಡ ಹೇರಿದ್ದರು. ಒತ್ತಡಗಳ ನಡುವೆಯೂ ಮಧುಸೂದನ್ ಅವರನ್ನು ಪಕ್ಷಕ್ಕೆ ಸ್ವಾಗತಿಸಲಾಗಿತ್ತು. ಪಕ್ಷದ ಹಿರಿಯರಾದ ಮಧುಸೂದನ್ ಅವರೇ ಎಐಎಡಿಎಂಕೆ ಪಕ್ಷದ ಶಾಶ್ವತ ಪ್ರಧಾನ ಕಾರ್ಯದರ್ಶಿಯಾಗಲಿದ್ದಾರೆಂದು ಘೋಷಣೆ ಮಾಡುತ್ತಿದ್ದೇನೆಂದು ಪನ್ನೀರ್ ಸೆಲ್ವಂ ಹೇಳಿದರು.
ಇದೇ ವೇಳೆ 2012ರಲ್ಲಿ ಜಯಲಲಿತಾ ಅವರಿಗೆ ಶಶಿಕಲಾ ಅವರು ಬರೆದಿದ್ದ ಪತ್ರದ ಪ್ರಸ್ತಾಪ ಮಾಡಿದ ಅವರು, "ಪತ್ರದಲ್ಲಿರುವ ಅಂಶಗಳನ್ನು ನೋಡಿದರೆ, ಶಶಿಕಲಾಗೆ ರಾಜಕೀಯದಲ್ಲಿರುವ ಅರ್ಹತೆಯಿಲ್ಲ. ವೇದಾ ನಿಲಯಂಗೆ ಶಶಿಕಲಾ ನೆರಳು ಕೂಡ ಬೀಳಬಾರದು ಎಂದು ಈ ಹಿಂದೆಯೇ ಅಮ್ಮ ಹೇಳಿದ್ದರು. ಇದೀಗ ಶಶಿಕಲಾ ನನ್ನನ್ನೇ ದ್ರೋಹಿ ಎಂದು ಹೇಳುತ್ತಿದ್ದಾರೆ. ನಟನೆ ಮಾಡುತ್ತಿರುವುದು ಯಾರು ಎಂಬುದು ಇದರಿಂದ ತಿಳಿಯುತ್ತದೆ. ಅಮ್ಮ ಇಟ್ಟಿದ್ದ ನಂಬಿಕೆಯನ್ನು ಶಶಿಕಲಾ ಉಳಿಸಿಕೊಳ್ಳಲಿಲ್ಲ. ಶಶಿಕಲಾಳನ್ನು ನಂಬಬೇಡಿ ಅಂದು ಅಮ್ಮ ತಿಳಿಸಿದ್ದರು ಎಂದು ಪನ್ನೀರ್ ಸೆಲ್ವಂ ಅವರು ಹೇಳಿದ್ದಾರೆ.
ತಮಿಳುನಾಡಿಗೆ ಆಗಮಿಸಿದ ರಾಜ್ಯಪಾಲ ವಿದ್ಯಾಸಾಗರ್ ರಾವ್
ಇನ್ನು ತಮಿಳುನಾಡು ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿರುವಂತೆಯೇ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ತಮಿಳುನಾಡಿಗೆ ವಾಪಸಾಗಿದ್ದಾರೆ ಎಂದು ತಿಳಿದುಬಂದಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಪನ್ನೀರ್ ಸೆಲ್ವಂ ಅವರು ವಿದ್ಯಾಸಾಗರ್ ರಾವ್ ಅವರನ್ನು ಸ್ವಾಗತಿಸಿದ್ದು, ಸಂಜೆ 5 ಗಂಟೆಗೆ ಪನ್ನೀರ್ ಸೆಲ್ವಂ ಅವರು ರಾಜ್ಯಪಾಲರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ 7 ಗಂಟೆಗೆ ಶಶಿಕಲಾ ಅವರ ಭೇಟಿಗೆ ಸಮಯ ನಿಗದಿಯಾಗಿದ್ದು, ರಾಜ್ಯಪಾಲರ ಮುಂದೆ ಶಶಿಕಲಾ ತಮ್ಮ ಬೆಂಬಲಿಗ ಶಾಸಕರ ಪರೇಡ್ ನಡೆಸಲಿದ್ದಾರೆ.
ಇನ್ನು ಶಶಿಕಲಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದ ಎಐಎಡಿಎಂಕೆ ಪಕ್ಷದ 130 ಶಾಸಕರು ಈಗಲೂ ಖಾಸಗಿ ರೆಸಾರ್ಟ್ ನಲ್ಲಿ ತಂಗಿದ್ದಾರೆ ಎಂದು ಮೂಲಗಳು ತಿಳಿಸಿವೆ.