ಕೋಲ್ಕತಾ: ಬುರ್ರಾಬಜಾರ್ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ
ಕೋಲ್ಕತಾ: ಕೋಲ್ಕತಾದ ಬಹುದೊಡ್ಡ ಸಗಟು ಮಾರುಕಟ್ಟೆಯೆಂದೇ ಖ್ಯಾತಿ ಪಡೆದುಕೊಂಡಿರುವ ಬುರ್ರಾಬಜಾರ್ ಮಾರುಕಟ್ಟೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.
ಕಳೆದ ರಾತ್ರಿ ಮಾರುಕಟ್ಟೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುದ್ದಿ ತಿಳಿಯುತ್ತಿದ್ದಂತೆಯೇ 30 ಅಗ್ನಿ ಶಾಮಕದಳದ ವಾಹನಗಳೊಂದಿಗೆ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಮಾಡಿದ್ದಾರೆ. ಪ್ರಸ್ತುತ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಮಾರುಕಟ್ಟೆಯ ಸುತ್ತಲೂ ದಟ್ಟ ಹೊಗೆ ಆವರಿಸಿದೆ ಎಂದು ತಿಳಿದುಬಂದಿದೆ.
ಅಗ್ನಿ ಶಾಮಕದಳ ಸಿಬ್ಬಂದಿಗಳು ರಾತ್ರಿಯಿಡೀ ಕಾರ್ಯಾಚರಣೆಯನ್ನು ನಡೆಸಿದ್ದು, ಈಗಲೂ ಕಾರ್ಯಾಚರಣೆ ಮುಂದುವರೆದಿದೆ. ಘಟನೆಯಲ್ಲಿ ಈ ವರೆಗೂ ಯಾವುದೇ ಸಾವು-ನೋವುಗಳಾಗಿರುವುದಾಗಿ ವರದಿಗಳಾಗಿಲ್ಲ.
ಮಾರುಕಟ್ಟೆಯ ಸುತ್ತಲೂ ದಟ್ಟ ಹೊಗೆ ಆವರಿಸಿರುವುದರಿಂದಾಗಿ ಸ್ಥಳೀಯ ಜನರನ್ನು ಸ್ಥಳಾಂತರಿಸಲಾಗಿದೆ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಬುರ್ರಾಬಜಾರ್ ಪೊಲೀಸ್ ಠಾಣೆ ಬಹುಹಂತದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಕೆಲವೇ ನಿಮಿಷಗಳಲ್ಲಿ ಬೆಂಕಿಯ ಕೆನ್ನಾಲಿಗೆ ಸ್ಥಳೀಯ ಕಟ್ಟಡಗಳಿಗೂ ಹೊತ್ತಿಕೊಳ್ಳಲು ಆರಂಭಿಸಿದೆ. ಘಟನೆಗೆ ಪ್ರಮುಖ ಕಾರಣಗಳು ಈವರೆಗೂ ತಿಳಿದುಬಂದಿಲ್ಲ. ಅಗ್ನಿ ಅವಘಡದ ವೇಳೆ ಕಟ್ಟಡದಲ್ಲಿ ಕೆಲವರು ಸಿಲುಕಿ ಹಾಕಿಕೊಂಡಿದ್ದರು. ನಂತರ ಕಾರ್ಯಾಚರಣೆಗಳಿದಿದ್ದ ಅಧಿಕಾರಿಗಳು ಜನರನ್ನು ರಕ್ಷಣೆ ಮಾಡಿದ್ದರು.
ಮಾರುಕಟ್ಟೆ ಅತ್ಯಂತ ಇಕ್ಕಟ್ಟಿನ ಪ್ರದೇಶವಾದ್ದರಿಂದಾಗ ಕಾರ್ಯಾಚರಣೆಗೆ ಹಲವು ತೊಡಕುಗಳುಂಟಾಗಿದ್ದವು. ಸಾಕಷ್ಟು ಶ್ರಮದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಸ್ಧಳದಲ್ಲಿ ಈಗಲೂ ದಟ್ಟ ಹೊಗೆ ಆವರಿಸಿಕೊಂಡಿದೆ. ಅಗ್ನಿ ಅವಘಡದಿಂದಾಗಿ ಕಟ್ಟಡ ಕುಸಿದು ಬೀಳುವ ಸಂಭವವಿಸಿದ್ದು, ಈಗಾಗಲೇ ಸ್ಥಳೀಯರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics