ನವದೆಹಲಿ: 2019ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ದೇಶದ ಜನರಿಗೆ ಒಳ್ಳೆಯ ದಿನಗಳು ಬರುತ್ತವೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಬುಧವಾರ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಜನ್ ವೇದನಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ಸರ್ಕಾರದ ಹುಳುಕುಗಳನ್ನು ಮುಚ್ಚಿಕೊಳ್ಳಲು ನರೇಂದ್ರ ಮೋದಿ ನೋಟು ನಿಷೇಧವನ್ನು ಮುಂದಿಟ್ಟುಕೊಂಡಿದ್ದಾರೆ. ನೋಟು ನಿಷೇಧ ಎನ್ ಡಿಎ ಸರ್ಕಾರದ ಅಸಮರ್ಥ ನಿರ್ಧಾರವಾಗಿದ್ದು, ಸರ್ಕಾರದ ನಿರ್ಧಾರದ ಮೂಲಕ ದೇಶದ ಪ್ರತಿಯೊಂದು ಸಂಸ್ಥೆಗಳನ್ನೂ ಮೋದಿ ದುರ್ಬಲಗೊಳಿಸಿದ್ದಾರೆ ಎಂದು ಕಿಡಿ ಕಾರಿದರು.
ಇದೇ ವೇಳೆ ಪ್ರಧಾನಿ ಮೋದಿ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಹೈಜಾಕ್ ಮಾಡಿ ಅದಕ್ಕೆ ಮರು ನಾಮಕರಣ ಮಾಡಿ ಜಾರಿಗೆ ತರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯೋಗಸಾನವನ್ನು ಬಹಳ ಚೆನ್ನಾಗಿ ಮಾಡಬಹುದು ಆದರೆ ಅವರು ಪದ್ಮಾಸನ ಹಾಕುವುದಿಲ್ಲ. ಇದನ್ನು ಯಾರಾದರೂ ಗಮನಿಸಿದ್ದೀರಾ..? ಕ್ಲೀನ್ ಇಂಡಿಯಾ ಯೋಜನೆಗಾಗಿ ಪೊರಕೆ ಹಿಡಿದು ಪೋಸ್ ಕೊಡುವ ಪ್ರಧಾನಿ ಮೋದಿ ಅಲ್ಲಿ ಏನನ್ನೂ ಶುಚಿಗೊಳಿಸುವುದಿಲ್ಲ. ಕೇವಲ ಕ್ಯಾಮೆರಾಗಳಿಗೆ ಪೋಸ್ ಕೊಡವುದಷ್ಟೇ ಅವರ ಕೆಲಸ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಆರ್ ಎಸ್ ಎಸ್ ವಿರುದ್ಧವೂ ಕಿಡಿಕಾರಿದ ರಾಹುಲ್ ಗಾಂಧಿ, ಆರ್ ಎಸ್ ಎಸ್ ಏಕಪಕ್ಷೀಯವಾಗಿ ವರ್ತಿಸುತ್ತಿದ್ದು, ಸರ್ವೋಚ್ಛ ಅಧಿಕಾರಿಯಂತೆ ಸೂಚನೆ ನೀಡುತ್ತಿದೆ. ಬಿಜೆಪಿ ಹೇಳಿದ್ದು ನಿಜ ನಾವು 7 ವರ್ಷಗಳಲ್ಲಿ ಮಾಡಲಾಗದ್ದನ್ನು ಮೋದಿ ಸರ್ಕಾರ ಕೇವಲ 2.5 ವರ್ಷಗಳಲ್ಲಿ ಮಾಡಿ ತೋರಿಸಿದೆ. ಅದೇನೆಂದರೆ ಆರ್ ಬಿಐ, ನ್ಯಾಯಾಂಗದಂತಹ ದೇಶದ ಪ್ರಮುಖ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ಮತ್ತು ಆರ್ ಎಸ್ ಎಸ್ ಇಂದು ದುರ್ಬಲಗೊಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ನೋಟು ನಿಷೇಧದ ಸಾಧಕ-ಬಾಧಕಗಳ ಕುರಿತಂತೆ ತಮ್ಮನ್ನು ತಾವೇ ಪ್ರಶ್ನಿಸಿಕೊಂಡರೆ ಉತ್ತರ ಸಿಗುತ್ತದೆ. ದೇಶದಲ್ಲಿನ ಹಳ್ಳಿಯ ಜನತೆ, ಕಾರ್ಮಿಕ ವರ್ಗ, ರೈತಾಪಿ ವರ್ಗಗಳು ಹೇಗೆ ಆರ್ಥಿಕ ಬಿಕ್ಕಟ್ಟಿನಿಂದ ಭವಣೆ ಪಡುತ್ತಿವೆ ಎಂದು ತಿಳಿಯುತ್ತದೆ. 2019ರಲ್ಲಿ ದೇಶದ ಜನತೆಗೆ ಖಂಡಿತಾ ಅಚ್ಚೇದಿನ್ ಬರುವ ವಿಶ್ವಾಸ ತಮಗಿದ್ದು, ಕಾಂಗ್ರೆಸ್ ಪಕ್ಷವನ್ನು ಜನ ಬೆಂಬಲಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದರು.