ನವದೆಹಲಿ: ನೋಟು ನಿಷೇಧ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ತಿರುಗೇಟು ನೀಡಿದ್ದು. ಜನರ ಬಗ್ಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ ಮೋಜು ಮಾಡಲು ರಜೆಗೆ ತೆರಳುತ್ತಿರಲಿಲ್ಲ ಎಂದು ಹೇಳಿದೆ.
ಅತ್ತ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಜನ ವೇದನಾ ಕಾರ್ಯಕ್ರಮ ಅಂತ್ಯವಾಗುತ್ತಿದ್ದಂತೆಯೇ ಇತ್ತ ಬಿಜೆಪಿ ತನ್ನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಹೇಳಿಕೆಯಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು. ರಾಹುಲ್ ಗಾಂಧಿ ಓರ್ವ ಪಾರ್ಟ್ ಟೈಮ್ ರಾಜಕಾರಣಿ. ಹೀಗಾಗಿ ಅವರ ಮಾತಿಗೆ ಬೆಲೆ ನೀಡುವ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅವರು ರಜೆಯ ಮೋಜು ಮುಗಿಸಿಕೊಂಡು ಭಾರತಕ್ಕೆ ವಾಪಸಾಗಿದ್ದಾರೆ. ರಾಹುಲ್ ಗಾಂಧಿ ಅವರಿಗೆ ನಿಜಕ್ಕೂ ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಅವರು ರಜೆ ಮೇಲೆ ತೆರಳುತ್ತಿರಲಿಲ್ಲ ಎಂದು ಬಿಜೆಪಿ ತಿರುಗೇಟು ನೀಡಿದೆ.