ಲಕ್ನೋ: ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮಂಗಳವಾರ ಭೇಟಿ ಮಾಡಿ ಸುಮಾರು 90 ನಿಮಿಷಗಳ ಮಾತುಕತೆ ನಡೆಸಿದರೂ ಕುಟುಂಬ ಕಲಹ ಶಮನಮಾಡಲು ಸಫಲವಾಗಿಲ್ಲ. ಇಬ್ಬರ ನಡುವಿನ ಭಿನ್ನಾಬಿಪ್ರಾಯಗಳಿಂದಾಗಿ ಮುಂದಿನ ವಿಧಾನ ಸಭೆ ಚುನಾವಣೆನ್ನು ಒಟ್ಟಾಗಿ ಎದುರಿಸಬೇಕು ಎಂಬ ಆಸೆಗೆ ಮತ್ತೆ ತಣ್ಣಿರೆರಚಿದಂತಾಗಿದೆ.
ಸಮಾಜವಾದಿ ಪಕ್ಷ (ಎಸ್‌ಪಿ) ಅಧಿಕಾರಕ್ಕೆ ಬಂದರೆ ಅಖಿಲೇಶ್ ಯಾದವ್ ಅವರೇ ಮುಖ್ಯಮಂತ್ರಿ ಎಂದು ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಹೇಳಿಕೆ ಇಬ್ಬರು ಮತ್ತೆ ಒಂದಾಗಬಹುದೆಂಬ ಆಶಾಭಾವನೆ ಮೂಡಿಸಿತ್ತು. ಆದರೆ ಮಂಗಳವಾರ ನಡೆದ ಮಾತುಕತೆ ಫಲಪ್ರದವಾಗಿಲ್ಲ, ಇಬ್ಬರು ತಮ್ಮ ನಿಲುವಿಗೆ ಬದ್ಧರಾಗಿರುವುದರಿಂದ ಮತ್ತೆ ಒಟ್ಟಾಗಲು ಸಾಧ್ಯವಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷದ ಚಿಹ್ನೆ ಸೈಕಲ್‌ಗಾಗಿ ಎರಡೂ ಬಣಗಳು ಸಲ್ಲಿಸಿರುವ ಅರ್ಜಿಗಳನ್ನು ಚುನಾವಣಾ ಆಯೋಗ ಶುಕ್ರವಾರ (ಇದೇ 13) ವಿಚಾರಣೆ ನಡೆಸಲಿದೆ. ವಿಚಾರಣೆಗೆ ಹಾಜರಾಗುವಂತೆ ಮುಲಾಯಂ ಮತ್ತು ಅಖಿಲೇಶ್ ಅವರಿಗೆ ನೋಟಿಸ್ ನೀಡಲಾಗಿದೆ.
ಮುಲಾಯಂ ಅವರ ಬದಲಿಗೆ ಪಕ್ಷದ ಅಧ್ಯಕ್ಷರಾಗಿ ಅಖಿಲೇಶ್ ನೇಮಕ, ಮುಂದಿನ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಅಧಿಕಾರ ಮುಂತಾದ ಕೆಲ ವಿಚಾರಗಳನ್ನು ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಅಖಿಲೇಶ್ ಬಿಟ್ಟುಕೊಡಬೇಕು ಮತ್ತು ಪಕ್ಷದ ಚಿಹ್ನೆ ‘ಸೈಕಲ್’ಗಾಗಿ ಚುನಾವಣಾ ಆಯೋಗಕ್ಕೆ ನೀಡಿದ ಅರ್ಜಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಮುಲಾಯಂ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಭೇಟಿಯ ವೇಳೆ ನಡೆದ ವಿಷಯಗಳನ್ನು ಯಾರೋಬ್ಬರು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.