ದೇಶ

ಸೇನಾ ದಿನಾಚರಣೆ: ಭಾರತೀಯ ಯೋಧರಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

Sumana Upadhyaya
ನವದೆಹಲಿ: ಸೇನಾ ದಿನಾಚರಣೆ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಎಲ್ಲಾ ಸೈನಿಕರು, ಸೇನೆಯ ಹಿರಿಯ ಅಧಿಕಾರಿಗಳು ಮತ್ತು ಅವರ ಕುಟುಂಬದವರಿಗೆ ಶುಭಾಶಯ ಕೋರಿದ್ದಾರೆ.
''ಎಲ್ಲಾ ಸೈನಿಕರು, ಹಿರಿಯರು ಮತ್ತು ಅವರ ಕುಟುಂಬದವರಿಗೆ ಸೇನಾ ದಿನದ ಶುಭಾಶಯಗಳು. ಭಾರತೀಯ ಸೇನೆಯ ಧೈರ್ಯ ಮತ್ತು ಅತ್ಯಮೂಲ್ಯ ಸೇವೆಗಳಿಗೆ ಪ್ರಣಾಮಗಳು'' ಎಂದು ಟ್ವೀಟ್ ಮಾಡಿದ್ದಾರೆ.
ಭಾರತೀಯ ಯೋಧರ ಧೈರ್ಯ ಮತ್ತು ತ್ಯಾಗವನ್ನು ಕೊಂಡಾಡಿದ ಅವರು, ಭಾರತದ ಸ್ವಾಯತ್ತತೆಯನ್ನು ಸೇನೆ ಯಾವತ್ತಿಗೂ ಕಾಪಾಡಿಕೊಂಡು ಬಂದಿದೆ ಎಂದು ಹೇಳಿದ್ದಾರೆ.
'' ಭಾರತೀಯ ಸೇನೆ ಯಾವತ್ತಿಗೂ ಮುಂದಿನ ಸಾಲಿನಲ್ಲಿ ನಿಲ್ಲುತ್ತದೆ. ಅದು ದೇಶದ ಸಾರ್ವಭೌಮತ್ವವನ್ನು ಕಾಪಾಡುವ ವಿಷ ಯದಲ್ಲಾಗಿರಬಹುದು ಅಥವಾ ನೈಸರ್ಗಿಕ  ವಿಕೋಪದಂತಹ ಸಂದರ್ಭಗಳಲ್ಲಿ ನಾಗರಿಕರಿಗೆ ಸಹಾಯ ಮಾಡುವ ವಿಷಯದಲ್ಲಾಗಿರಬಹುದು ಸೇನೆ ಎಂದಿಗೂ ಸಹಾಯಕ್ಕೆ ಸಿದ್ದವಿರುತ್ತದೆ''ಎಂದು ಟ್ವೀಟ್ ಮಾಡಿದ್ದಾರೆ.
ಭಾರತೀಯ ಸೇನೆಯ ತ್ಯಾಗವನ್ನು ಸ್ಮರಿಸಿಕೊಂಡ ಪ್ರಧಾನಿ, ತಮ್ಮ ಜೀವವನ್ನು ಅಪಾಯಕ್ಕೊಡ್ಡಿ ದೇಶ ಮತ್ತು ನಾಗರಿಕರ ರಕ್ಷಣೆಗೆ ಮುಂದಾಗುತ್ತಾರೆ. ಸೈನಿಕರ ತ್ಯಾಗ, ಬಲಿದಾನಗಳಿಂದ ದೇಶದ 125 ಕೋಟಿ ಜನತೆ ಶಾಂತಿ, ಸೌಹಾರ್ದದಿಂದ ಜೀವನ ನಡೆಸುತ್ತಾರೆ ಎಂದು ಹೇಳಿದ್ದಾರೆ.
ಲೆಫ್ಟಿನೆಂಟ್ ಜನರಲ್ ಕೆ.ಎಂ.ಕಾರ್ಯಪ್ಪ ಅವರ ಸ್ಮರಣಾರ್ಥ ಪ್ರತಿವರ್ಷ ಜನವರಿ 15ನ್ನು  ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ  1949ರಲ್ಲಿ ಕೊನೆಯ ಬ್ರಿಟಿಷ್ ಕಮಾಂಡರ್ ಆಗಿದ್ದ ಜನರಲ್ ಸರ್ ಫ್ರಾನ್ಸಿಸ್ ಬುಚರ್ ಅವರಿಂದ ಭಾರತೀಯ ಸೇನೆಯ ಕಮಾಂಡರ್ ಆಗಿ ಕೆ.ಎಂ.ಕಾರ್ಯಪ್ಪ ಅವರು ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದರು. 
SCROLL FOR NEXT