ಲಖನೌ: ತಮ್ಮ ಮತ್ತು ತಂದೆ ಮುಲಾಯಂ ಸಿಂಗ್ ಯಾದವ್ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಲ್ಲಿ. ನಾವು ಒಂದಾಗಿ ಚುನಾವಣೆ ಎದುರಿಸುತ್ತಿದ್ದೇವೆ ಮತ್ತು ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸುತ್ತೇವೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಕೇಂದ್ರ ಚುನಾವಣಾ ಆಯೋಗದಿಂದ ಸೈಕಲ್ ಚಿನ್ಹೆ ಪಡೆದ ಬೆನ್ನಲ್ಲೇ ಸಮಾಜವಾದಿ ಪಕ್ಷ ಇಬ್ಭಾಗವಾಗಲಿದೆ ಎಂಬ ಮಾಧ್ಯಮಗಳ ವರದಿಗಳನ್ನು ತಳ್ಳಿ ಹಾಕಿರುವ ಅಖಿಲೇಶ್ ಯಾದವ್, ಇಂದಿಗೂ ಪಕ್ಷ ಒಂದಾಗಿಯೇ ಇದೆ. ಪಕ್ಷ ಒಡೆಯುವ ಅಥವಾ ಇಬ್ಭಾಗವಾಗುವ ಮಾತೇ ಇಲ್ಲ. ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಪ್ರಮುಖ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ನಾನು ಮತ್ತು ನನ್ನ ತಂದೆ ಶ್ರಮಿಸುತ್ತಿದ್ದೇವೆ. ಮಾಧ್ಯಮಗಳಲ್ಲಿ ಬಂದ ವರದಿಗಳೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ನಮ್ಮ ತಂದೆಯೊಂದಿಗಿನ ಸಂಬಂಧ ಮೊದಲಿನಿಂತೆಯೇ ಇದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಹಿಡಿಯುವತ್ತ ಪಕ್ಷ ಚಿಂತನೆ ಹರಿಸಿದ್ದು, ಇದಕ್ಕಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುವ ಪಣ ತೊಟ್ಟಿದ್ದೇವೆ. ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಮತವಿಲ್ಲ ಎಂದು ಅಖಿಲೇಶ್ ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡದ ಅಖಿಲೇಶ್ ಮುಂದಿನ ದಿನಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಖಿಲೇಶ್ ಹೇಳಿದರು.
ಸಮಾಜವಾದಿ ಪಕ್ಷದ ಭಿನ್ನಮತದಿಂದಾಗಿ ತೀವ್ರ ಕುತೂಹಲ ಕೆರಳಿಸಿದ್ದ ಸೈಕಲ್ ಚಿನ್ಹೆಯ ಹೋರಾಟದಲ್ಲಿ ಅಖಿಲೇಶ್ ಯಾದವ್ ಬಣಕ್ಕೆ ಗೆಲುವು ದೊರೆತಿತ್ತು. ಶೇ.90ರಷ್ಟು ಶಾಸಕರ ಬೆಂಬಲ ಹೊಂದಿರುವ ಅಖಿಲೇಶ್ ಯಾದವ್ ಬಣಕ್ಕೆ ಕೇಂದ್ರ ಚುನಾವಣಾ ಆಯೋಗ ಸೈಕಲ್ ಚಿನ್ಹೆಯನ್ನು ನೀಡಿತ್ತು.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 11, ಫೆಬ್ರವರಿ 15, ಫೆಬ್ರವರಿ 19, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 4 ಮತ್ತು ಮಾರ್ಚ್ 8ರಂದು ಒಟ್ಟು 7 ಹಂತದಲ್ಲಿ ಮತದಾನ ನಡೆಯಲಿದೆ.