ಲಖನೌ: ದೇವರ ಚಿತ್ರದಲ್ಲಿ ನನಗೆ ಪಕ್ಷದ ಚಿಹ್ನೆ (ಹಸ್ತ) ಕಾಣಿಸುತ್ತದೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆ ವಿರುದ್ಧ ಬಿಜೆಪಿ ಕೆಂಡಾಮಂಡವಾಗಿದ್ದು, ರಾಹುಲ್ ವಿರುದ್ಧ ಚುನಾವಣಾ ಆಯೋಗದ ಮೊರೆ ಹೋಗಿದೆ ಎಂದು ಬುಧವಾರ ತಿಳಿದುಬಂದಿದೆ.
ರಾಹುಲ್ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು, ರಾಹುಲ್ ಅವತು ತಮ್ಮ ಹೇಳಿಕೆ ಮೂಲಕ ನೀವು ನಮಗೆ ಮತ ಹಾಕಿದ್ದೇ ಆದರೆ, ನೀವು ನಿಮ್ಮ ಧರ್ಮಕ್ಕೆ ಮತ ಹಾಕಿದಂತೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ರಾಹುಲ್ ಅವರು ಭ್ರಷ್ಟ ನೀತಿ ಅನುಸರಿಸುತ್ತಿದ್ದು, ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ಚುನಾವಣಾ ಆಯೋಗ ವಶಪಡಿಸಿಕೊಳ್ಳಬೇಕೆಂದು ಹೇಳಿದ್ದಾರೆ.
ರಾಹುಲ್ ಹೇಳಿಕೆ ಕುರಿತಂತೆ ಚುನಾವಣಾ ಆಯೋಗದ ಬಳಿ ದೂರು ನೀಡಲಾಗಿದ್ದು, ಚುನಾವಣಾ ಆಯೋಗ ಕೂಡ ಇದಕ್ಕೆ ಧನಾತ್ಮಕ ಪ್ರತಿಕ್ರಿಯೆಯನ್ನು ನೀಡಿದೆ. ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ ಎಂದು ತಿಳಿಸಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ಜ.11 ರಂದು ನಡೆದ ಕಾಂಗ್ರೆಸ್ ನ ಜನವೇದನೆ ಸಮ್ಮೇಳನದಲ್ಲಿ ಮಾತನಾಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು, ದೇವರ ಚಿತ್ರದಲ್ಲಿ ನನಗೆ ಪಕ್ಷದ ಚಿಹ್ನೆ (ಹಸ್ತ) ಕಾಣಿಸುತ್ತದೆ. ಪಕ್ಷದ ಕೈ ಗುರಿತು ಶಿವ, ಗುರುನಾನಕ್, ಬುದ್ಧ, ಇಸ್ಲಾಂ, ಜೈನ ಧರ್ಮದವರ 'ವರದ ಹಸ್ತ'ವಾಗಿದೆ ಎಂದು ಹೇಳಿದ್ದರು.