ಕೋಲ್ಕತಾ: ಆಂಧ್ರಪ್ರದೇಶದ ವಿಜಯನಗರಂನಲ್ಲಿ ಸಂಭವಿಸಿದ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟವರ ಕುಟುಂಬಸ್ಥರ ಕುರಿತು ತೀವ್ರ ಸಂತಾಪ ಸೂಚಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ಸುರಕ್ಷತೆ ಕ್ರಮ ಕೈಗೊಳ್ಳದ ಭಾರತೀಯ ರೈಲ್ವೆ ಇಲಾಖೆ ವಿರುದ್ಧ ಭಾನುವಾರ ಕಿಡಿಕಾಡಿದ್ದಾರೆ.
ದುರ್ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ರೈಲ್ವೆ ಇಲಾಖೆಯ ಕೆಲಸಗಾರರ ಬಗ್ಗೆ ನಮಗೆ ಹೆಮ್ಮೆಯಿದೆ. ಆದರೆ, ರೈಲ್ವೆ ಇಲಾಖೆ ಸುರಕ್ಷತೆ ಹಾಗೂ ಭದ್ರತೆಗೆ ಕಡಿಮೆ ಆದ್ಯತೆಯನ್ನು ನೀಡುತ್ತಿದೆ. ರೈಲ್ವೆ ಇಲಾಖೆ ನಡೆಸುತ್ತಿದ್ದ ಪ್ರತ್ಯೇಕ ಬಜೆಟ್ ನ್ನು ಕೇಂದ್ರ ಮೊಟಕುಗೊಳಿಸಿದೆ. ಭದ್ರತೆ ಹಾಗೂ ಸುರಕ್ಷತೆ ವಿಚಾರದಲ್ಲಿ ರೈಲ್ವೆ ಇಲಾಖೆ ರಾಜಿಯಾಗಿದೆ. ಇದರ ಪರಿಣಾಮ ಮುಗ್ಧ ಜನರು ಸಾವನ್ನಪ್ಪುತ್ತಿದ್ದಾರೆ, ಮೃತಪಟ್ಟ ಕುಟುಂಬಸ್ಥರಿಗೆ ಸಂತಾಪ ಸೂಚಿಸುತ್ತಿದ್ದೇನೆಂದು ಹೇಳಿದ್ದಾರೆ.
ಘಟನೆ ಸಂಬಂಧ ಸಚಿವರನ್ನು ನಾವು ದೂಷಿಸುತ್ತಿಲ್ಲ. ಸಚಿವರು ತಮ್ಮಿಂದ ಸಾಧ್ಯವಾಗುವಷ್ಟು ಶ್ರಮವನ್ನು ಪಡುತ್ತಿದ್ದಾರೆ. ಆದರೆ, ಸರ್ಕಾರ ಪ್ರಯಾಣಿಕರ ಭದ್ರತೆ ಹಾಗೂ ಸುರಕ್ಷತೆಯ ಬಗ್ಗೆ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಜಗದಲ್ ಪುರ-ಭುವನೇಶ್ವರ ನಡುವೆ ಸಂಚರಿಸುತ್ತಿದ್ದ ರೈಲು ಕಳೆದ ರಾತ್ರಿ 11.30ರ ಸುಮಾರಿಗೆ ಹಿರಾಖಂಡ್ ಎಕ್ಸೆಪ್ರೆಸ್ ರೈಲು ಆಂಧ್ರಪ್ರದೇಶದ ರಾಯಘಡ ಸಮೀಪ ಕೂನೇರು ನಿಲ್ದಾಣದ ಬಳಿ ಹಳಿ ತಪ್ಪಿತ್ತು. ದುರ್ಘಟನೆಯಲ್ಲಿ ಈ ವರೆಗೂ 36 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.