ವಿಶಾಖಪಟ್ಟಣ: ಶನಿವಾರ ರಾತ್ರಿ ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಕೂನೇರು ರೈಲು ನಿಲ್ದಾಣದ ಸಮೀಪ ಸಂಭವಿಸಿದ ಹಿರಾಖಂಡ್ ರೈಲು ಅಪಘಾತ ಪ್ರಕರಣ ಸಂಬಂಧ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ದಳದ 4 ಮಂದಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ಹಿರಾಖಂಡ್ ಎಕ್ಸ್ ಪ್ರೆಸ್ ರೈಲು ದುರಂತ ಪ್ರಕರಣದಲ್ಲಿ ನಕ್ಸರ ಅಥವಾ ಉಗ್ರಗಾಮಿಗಳ ಕೈವಾಡದ ಕುರಿತು ಊಹಾಪೋಹಗಳು ಹಬ್ಬಿರುವ ಹಿನ್ನಲೆಯಲ್ಲಿ ಪ್ರಸ್ತುತ ಎನ್ ಐಎ ಅಧಿಕಾರಿಗಳ ತನಿಖೆ ತೀವ್ರ ಕುತೂಹಲ ಕೆರಳಿಸಿದೆ. ಜಗದಲ್ ಪುರ-ಭುವನೇಶ್ವರ-ಹಿರಾಖಂಡ್ ನಡುವೆ ಸಂಚರಿಸುತ್ತಿದ್ದ ಹಿರಾಖಂಡ್ ಎಕ್ಸೆಪ್ರೆಸ್ ರೈಲು ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ರಾಯಘಡ ಸಮೀಪ ಕೂನೇರು ನಿಲ್ದಾಣದ ಬಳಿ ಹಳಿ ತಪ್ಪಿತ್ತು. ರೈಲಿನ ಎಂಜಿನ್ ಸೇರಿದಂತೆ 9 ಬೋಗಿಗಳು ಹಳಿ ತಪ್ಪಿದ ಪರಿಣಾಮ ರೈಲಿನಲ್ಲಿದ್ದ ಸುಮಾರು 41 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರು. ಅಂತೆಯೇ ಸುಮಾರು 115ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿತ್ತು. ಅಲ್ಲದೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಕೂಡ ಸಿಐಡಿ ತನಿಖೆಗೆ ಆದೇಶಿಸಿದ್ದರು. ಅದರಂತೆ ಇದೀಗ ಘಟನಾ ಸ್ಥಳಕ್ಕೆ ಎನ್ ಐಎ ಅಧಿಕಾರಿಗಳು ಅಗಮಿಸಿದ್ದು, ಘಟನಾ ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ. ಅಂತೆಯೇ ಸಮೀಪದ ರೈಲ್ವೇಗೇಟ್ ಸಿಬ್ಬಂದಿ, ಸ್ಟೇಷನ್ ಮಾಸ್ಟರ್, ಟ್ರಾಕ್ ವೀಕ್ಷಣಾ ಸಿಬ್ಬಂದಿ ಹಾಗೂ ಇತರೆ ಅಧಿಕಾರಿಗಳನ್ನು ಎನ್ ಐಎ ತನಿಖೆಗೊಳಪಡಿಸಲಿದೆ ಎಂದು ತಿಳಿದುಬಂದಿದೆ.
ಕೇವಲ 2 ತಿಂಗಳ ಅವಧಿಯಲ್ಲಿ ಮೂರನೇ ದೊಡ್ಡ ಅಪಘಾತ ಇದಾಗಿದ್ದು, ಈ ಹಿಂದೆ ಕಾನ್ಪುರದಲ್ಲೂ ರೈಲು ಹಳಿ ತಪ್ಪಿದ ಪರಿಣಾಮ 62ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಈ ಹಿಂದೆ ಕಾನ್ಪುರ ರೈಲು ದುರಂತ ಪ್ರಕರಣದ ಹಿಂದೆ ಪಾಕಿಸ್ತಾನ ಗುಪ್ತಚರ ಇಲಾಖೆಯ ಕೈವಾಡವಿರುವ ಕುರಿತು ಶಂಕೆಗಳು ವ್ಯಕ್ತವಾಗಿರುವಂತೆಯೇ ಇತ್ತ ಹಿರಾಖಂಡ್ ಎಕ್ಸೆ ಪ್ರೆಸ್ ರೈಲು ದುರಂತದಲ್ಲೂ ಅಂತಹುದೇ ಶಂಕೆಗಳು ಮೂಡತೊಡಗಿವೆ. ಈ ಹಿನ್ನಲೆಯಲ್ಲಿ ಎನ್ ಐಎ ಅಧಿಕಾರಿಗಳ ತನಿಖೆ ಮಹತ್ವ ಪಡೆದುಕೊಂಡಿದೆ.