ನವದೆಹಲಿ: ಪಂಚರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಅಭ್ಯರ್ಥಿಗಳ ಹಣ ವಿತ್ ಡ್ರಾ ಮಿತಿಯನ್ನು ಏರಿಕೆ ಮಾಡುವಂತೆ ಚುನಾವಣಾ ಆಯೋಗ ಮಾಡಿದ್ದ ಮನವಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ತಿರಸ್ಕರಿಸಿದೆ.
ನೋಟು ನಿಷೇಧ ಬಳಿಕ ದೇಶದಲ್ಲಿ ಹೇರಲಾಗಿದ್ದ ಹಣ ವಿತ್ ಡ್ರಾ ಮಿತಿಯನ್ನು ಏರಿಕೆ ಮಾಡುವಂತೆ ಕೇಂದ್ರ ಚುನಾವಣಾ ಆಯೋಗ ಮಾಡಿದ್ದ ಮನವಿಯನ್ನು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ತಿರಸ್ಕರಿಸಿದ್ದಾರೆ. ಚುನಾವಣಾ ಅಭ್ಯರ್ಥಿಗಳು ತಮ್ಮ ಪ್ರಚಾರ ಕಾರ್ಯಕ್ಕೆ ಹಣ ಸಾಲುತ್ತಿಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ, ಹೀಗಾಗಿ ವಾರಕ್ಕೆ 24 ಸಾವಿರ ರು.ಗಳ ಮಿತಿಯನ್ನು ಅಭ್ಯರ್ಥಿಗಳಿಗೆ ಏರಿಕೆ ಮಾಡಬೇಕು ಎಂದು ಚುನಾವಣಾ ಆಯೋಗ ಆರ್ ಬಿಐ ಬಳಿ ಮನವಿ ಮಾಡಿತ್ತು.
ಆದರೆ ಈ ಮನವಿಯನ್ನು ಆರ್ ಬಿಐ ತಿರಸ್ಕರಿಸಿದ್ದು, ಈ ಹಂತದಲ್ಲಿ ಯಾವುದೇ ರೀತಿ ವಿತ್ ಡ್ರಾ ಮಿತಿ ಏರಿಕೆ ಸಾಧ್ಯವಿಲ್ಲ ಎಂದು ಹೇಳಿದೆ. ಚುನಾವಣಾ ಆಯೋಗಕ್ಕೆ ಪತ್ರ ಮೂಲಕ ಉತ್ತರಿಸಿರುವ ಆರ್ ಬಿಐ, ನಿಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆದರೆ, ಕಾನೂನಾತ್ಮಕ ಅಡೆತಡೆಗಳಿರುವುದರಿಂದ ವಿತ್ ಡ್ರಾ ಮಿತಿ ಹೇರಿಕೆ ಸಾಧ್ಯವಿಲ್ಲ ಎಂದು ಹೇಳಿದೆ.
ಇದಕ್ಕೂ ಮೊದಲು ಆರ್ ಬಿಐಗೆ ಪತ್ರ ಬರೆದಿದ್ದ ಆಯೋಗ, ಚುನಾವಣೆ ಮುಕ್ತಾಯದವರೆಗೂ ಅಂದರೆ ಮಾರ್ಚ್ 11ರವರೆಗೂ ಅಭ್ಯರ್ಥಿಗಳ ವಿತ್ ಡ್ರಾ ಮಿತಿಯನ್ನು ತಿಂಗಳಿಗೆ 2 ಲಕ್ಷಕ್ಕೆ ಏರಿಕೆ ಮಾಡಬೇಕು ಎಂದು ಹೇಳಿತ್ತು. ಪ್ರಸ್ತುತ ಪಡೆಯುತ್ತಿರುವ ವಾರಕ್ಕೆ 24 ಸಾವಿರ ರು.ಗಳು ಚುನಾವಣಾ ಪ್ರಚಾರಕ್ಕೆ ಸಾಲುವುದಿಲ್ಲ. ಹೀಗಾಗಿ ವಿತ್ ಡ್ರಾ ಮಿತಿ ಏರಿಕೆಗೆ ಮನವಿ ಮಾಡಿತ್ತು.