ಬೀಜಿಂಗ್: ಗಡಿ ಬಿಟ್ಟು ಹೋಗಿ ಇಲ್ಲವೇ ಯುದ್ಧ ಎದುರಿಸಲು ಸಿದ್ಧರಾಗಿ ಎಂಬ ಚೀನಾದ ಬೆದರಿಕೆಗೆ ಭಾರತ ಸೆಡ್ಡು ಹೊಡೆದಿರುವುದು ಚೀನಾ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದ್ದು, ಕಾಶ್ಮೀರ ವಿಷಯವನ್ನು ಮುಂದಿಟ್ಟುಕೊಂಡು ಭಾರತವನ್ನು ಬೆದರಿಸಲು ಚೀನಾ ಯೋಜನೆ ರೂಪಿಸಿರುವಂತಿದ್ದು, ಅಲ್ಲಿನ ಮಾಧ್ಯಮಗಳು ಕಾಶ್ಮೀರ ವಿವಾದದಲ್ಲಿ ಪಾಕಿಸ್ತಾನದ ಪರವಾಗಿ ನಿಲ್ಲುವ ಸೂಚನೆ ನೀಡಿದೆ.
ಚೀನಾ ಮಾಧ್ಯಮ ಗ್ಲೋಬಲ್ ಟೈಮ್ಸ್ ಈ ಬಗ್ಗೆ ಲೇಖನ ಪ್ರಕಟಿಸಿದ್ದು, ಡೋಕ್ಲಾಮ್ ನಲ್ಲಿ ಚೀನಾ ಸೇನೆ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿಯನ್ನು ವಿರೋಧಿಸಿ ಭೂತಾನ್ ಪರವಾಗಿ ಭಾರತೀಯ ಸೇನೆ ನಿಲ್ಲುವುದಾದರೆ, ಕಾಶ್ಮೀರದ ವಿವಾದದಲ್ಲಿ ಪಾಕಿಸ್ತಾನದ ಪರವಾಗಿ ಮೂರನೇ ರಾಷ್ಟ್ರದ ಸೇನೆಯೂ ಪ್ರವೇಶ ಮಾಡಬಹುದು ಎಂಬ ತರ್ಕವನ್ನು ಚೀನಾ ಥಿಂಕ್ ಟ್ಯಾಂಕ್ ಮುಂದಿಟ್ಟಿದೆ.
ಒಂದು ವೇಳೆ ತನ್ನ ಪರವಾಗಿ ನಿಲ್ಲುವಂತೆ ಭೂತಾನ್ ಮನವಿ ಮಾಡಿದ್ದರೂ ಸಹ ಭಾರತ ವಿವಾದಿತ ಪ್ರದೇಶದಲ್ಲಿ ಪ್ರವೇಶ ಮಾಡುವಂತಿಲ್ಲ ಎಂದು ಚೀನಾದಲ್ಲಿರುವ ಭಾರತೀಯ ವಿಷಯಗಳ ಅಧ್ಯಯನ ಕೇಂದ್ರದ ನಿರ್ದೇಶಕರು ಗ್ಲೋಬಲ್ ಟೈಮ್ಸ್ ನಲ್ಲಿ ಲೇಖನ ಬರೆದಿದ್ದಾರೆ.
ಭಾರತದ ಲಾಜಿಕ್ ಪ್ರಕಾರವೇ ಹೋಗುವುದಾದರೆ, ಕಾಶ್ಮೀರದ ವಿವಾದದಲ್ಲಿ ಪಾಕಿಸ್ತಾನದ ಪರವಾಗಿ ಮೂರನೇ ರಾಷ್ಟ್ರದ ಸೇನೆಯೂ ಪ್ರವೇಶ ಮಾಡಬಹುದು ಎಂದೂ ಲೇಖನದಲ್ಲಿ ಎಚ್ಚರಿಕೆ ನೀಡಲಾಗಿದೆ.