ನವದೆಹಲಿ: ಅಮರನಾಥ ಯಾತ್ರಿಗಳ ಮೇಲೆ ಉಗ್ರರ ದಾಳಿಯನ್ನು ತಪ್ಪಿಸಲು ವಿಫಲವಾಗಿರುವ ಜಮ್ಮು-ಕಾಶ್ಮೀರದ ಮೆಹಮೂಬಾ ಮುಫ್ತಿ ನೇತೃತ್ವದ ಸರ್ಕಾರವನ್ನು ವಜಾಗೊಳಿಸಬೇಕೆಂದು ವಿಶ್ವ ಹಿಂದು ಪರಿಷತ್ (ವಿಹೆಚ್ ಪಿ) ಯ ನಾಯಕ ಪ್ರವೀಣ್ ತೊಗಾಡಿಯಾ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಪ್ರವೀಣ್ ತೊಗಾಡಿಯಾ, ಮೆಹಬೂಬಾ ಮುಫ್ತಿ ಸರ್ಕಾರವನ್ನು ವಜಾಗೊಳಿಸಿ ಸೇನಾ ಆಡಳಿತವನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಉಗ್ರವಾದಿಗಳ ದಾಳಿಯನ್ನು ಉಗ್ರವಾಗಿ ಖಂಡಿಸುತ್ತೇವೆ, ಸರ್ಕಾರ ಹಿಂದೂಗಳಿಗೆ ಭದ್ರತೆಯೊದಗಿಸುವಲ್ಲಿ ವಿಫಲವಾಗಿದ್ದು, ತಕ್ಷಣವೇ ಸರ್ಕಾರವನ್ನು ವಜಾಗೊಳಿಸಬೇಕೆಂದು ತೊಗಾಡಿಯಾ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದೇ ವೇಳೆ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವುದಕ್ಕೆ ಸ್ಥಳೀಯರನ್ನು ದೂಷಿಸಿರುವ ಪ್ರವೀಣ್ ತೊಗಾಡಿಯಾ, ಕಾಶ್ಮೀರದ ಸ್ಥಳಿಯರನ್ನು ಪಾಕಿಸ್ತಾನದ ಏಜೆಂಟ್ ಗಳಾಗಿದ್ದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನ ಮಾಡಲು ಪಿಡಿಪಿ ವಿಫಲವಾಗಿರುವುದರ ನಡುವೆಯೂ ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮುಂದುವರೆಯುವುದನ್ನು ತೊಗಾಡಿಯಾ ಪ್ರಶ್ನಿಸಿದ್ದಾರೆ.