ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ನವದೆಹಲಿ: ಮತ್ತೊಮ್ಮೆ ಪುನರುಚ್ಚರಿಸುತ್ತೇನೆ, ಇರಾಕ್ ನಲ್ಲಿ ನಾಪತ್ತೆಯಾಗಿರುವ 39 ಭಾರತೀಯರನ್ನು ಸಾಕ್ಷ್ಯವಿಲ್ಲದೆಯೇ ಮೃತಪಟ್ಟಿದ್ದಾರೆಂದು ಘೋಷಿಸುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗುರುವಾರ ಹೇಳಿದ್ದಾರೆ.
ಇರಾಕ್ ನಲ್ಲಿ ಮೂರು ವರ್ಷಗಳ ಹಿಂದೆ ನಾಪತ್ತೆಯಾಗಿರುವ 39 ಭಾರತೀಯರ ಕುರಿತಂತೆ ಲೋಕಸಭೆಯಲ್ಲಿ ಮಾತನಾಡಿರುವ ಅವರು, ನಾಪತ್ತೆಯಾಗಿರುವ ಭಾರತೀಯ ಕುರಿತಂತೆ ಸಾಕ್ಷ್ಯಾಧಾರಗಳು ದೊರಕಿದ ಕೂಡಲೇ ಸಮಾಜಿಕ ಜಾಲತಾಣ ಟ್ವಿಟರ್ ಅಥವಾ ಅಧಿವೇಶನ ನಡೆಸುತ್ತಿದ್ದರೆ ಸಂಸತ್ತಿನಲ್ಲಿಯೇ ಈ ಬಗ್ಗೆ ಮಾಹಿತಿಯನ್ನು ನೀಡುತ್ತೇನೆಂದು ಹೇಳಿದ್ದಾರೆ.
ನಾಪತ್ತೆಯಾಗಿರುವ 39 ಭಾರತೀಯ ಕುರಿತು ಯಾವಾಗ ನನಗೆ ಸಾಕ್ಷಿ, ಪುರಾವೆಗಳು ದೊರೆಯುತ್ತವೆಯೇ ಅಂದು ನಾನು ಅಧಿವೇಶನ ನಡೆಯುತ್ತಿದ್ದರೆ ಸಂಸತ್ತಿಗೆ ಅಥವಾ ಟ್ವಿಟರ್ ಮೂಲಕ ಮಾಹಿತಿ ನೀಡುತ್ತೇನೆ. ಆದರೆ, ನಿನ್ನೆ ನೀಡಿದ್ದ ಹೇಳಿಕೆಯನ್ನು ಮತ್ತೆ ಪುನರುಚ್ಚರಿಸುತ್ತೇನೆ ಎಂದಿಗೂ ಸಾಕ್ಷ್ಯವಿಲ್ಲದೆಯೇ ಮೃತಪಟ್ಟಿದ್ದಾರೆಂದು ಘೋಷಣೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೇ ಲೋಕಸಭೆಯಲ್ಲಿ ಇರಾಕ್ ನ ಮೊಸುಲ್ ನಲ್ಲಿ ನಾಪತ್ತೆಯಾಗಿರುವ 39 ಭಾರತೀಯರ ಕುರಿತಂತೆ ಹೇಳಿಕೆ ನೀಡಿದ್ದ ಸುಷ್ಮಾ ಸ್ವರಾಜ್ ಅವರು, ಸಾಕ್ಷ್ಯವಿಲ್ಲದೆಯೇ ಯಾರನ್ನೂ ಮೃತಪಟ್ಟಿದ್ದಾರೆಂದು ಘೋಷಿಸುವುದಿಲ್ಲ. ನಾಪತ್ತೆಯಾಗಿರುವವರು ಮೃತಪಟ್ಟಿರುವುದಾಗಿ ಇರಾಕ್ ಸರ್ಕಾರ ಯಾವತ್ತೂ ಘೋಷಿಸಿಲ್ಲ. ಸಾಕ್ಷ್ಯಗಳಿಲ್ಲದೆಯೇ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆಂದು ಘೋಷಿಸುವುದು ತಪ್ಪು ಮತ್ತು ಪಾಪದ ಕೆಲಸ. ಅಂತಹ ಕೆಲಸವನ್ನು ನಾನು ಮಾಡುವುದಿಲ್ಲ ಎಂದು ಹೇಳಿದ್ದರು.