ಇಂದೋರ್: ಎಲೆಕೋಸಿನಲ್ಲಿ ಅಡಗಿದ್ದ ಹಾವನ್ನು ಗಮನಿಸಿದೇ ಅದನ್ನು ಬೇಯಿಸಿ ತಿಂದ ಪರಿಣಾಮ ತಾಯಿ ಮತ್ತು ಮಗಳು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದೋರ್ ನಲ್ಲಿ ನಡೆದಿದೆ.
ಮೂಲತಃ ಇಂದೋರ್ ನ ನಿವಾಸಿಗಳಾದ ಅಫ್ಝಾನ್ ಇಮಾಮ್ (35 ವರ್ಷ) ಮತ್ತು ಅವರ ಮಗಳು ಆಮ್ನಾ (15 ವರ್ಷ) ಆಸ್ಪತ್ರೆಗೆ ದಾಖಲಾಗಿದ್ದು, ಪ್ರಸ್ತುತ ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ ಗುರುವಾರ ತಾಯಿ ಅಫ್ಝಾನ್ ಇಮಾಮ್ ಮಾರುಕಟ್ಟೆಯಿಂದ ತಂದ ಎಲೆ ಕೋಸನ್ನು ಅಡುಗೆ ಮಾಡಿ ಮಗಳೊಂದಿಗೆ ಸೇವಿಸಿದ್ದಾರೆ. ಹೀಗೆ ಊಟ ಸೇವಿಸಿದ ಕೆಲವೇ ಕ್ಷಣಗಳಲ್ಲಿ ತಾಯಿ ಮತ್ತು ಮಗಳು ಇಬ್ಬರೂ ಅಸ್ವಸ್ಥರಾಗಿದ್ದು, ಮನೆಯಲ್ಲೇ ವಾಂತಿ ಮಾಡಿಕೊಂಡಿದ್ದಾರೆ.
ಹೀಗಾಗಿ ಕೂಡಲೇ ಇಬ್ಬರನ್ನೂ ಇಂದೋರ್ ನ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯರು ಪರೀಕ್ಷೆ ನಡೆಸಿದಾಗ ತಾವು ತಿಂದ ಎಲೆ ಕೋಸಿನಲ್ಲಿ ಹಾವಿನ ಮರಿ ಇರುವುದು ತಿಳಿದುಬಂದಿದೆ. ಇಬ್ಬರ ದೇಹಕ್ಕೆ ವಿಷ ಸೇರಿದೆಯೇ ಎಂಬುದರ ಬಗ್ಗೆ ತಿಳಿಯಲು ವಿವಿಧ ಪರೀಕ್ಷೆ ನಡೆಸಲಾಗಿದೆ. ಇಬ್ಬರ ಜೀವಕ್ಕೂ ಯಾವುದೇ ಅಪಾಯವಾಗಿಲ್ಲ’ ಎಂದು ಆಸ್ಪತ್ರೆಯ ಅಧೀಕ್ಷಕ ಡಾ. ಧರ್ಮೇಂದ್ರ ಜಾನ್ವರ್ ತಿಳಿಸಿದರು. ಈ ಇಬ್ಬರು ತಿಂದ ಹಾವು ವಿಷಪೂರಿತವೇ ಎಂಬುದು ಇನ್ನೂ ದೃಢಪಟ್ಟಿಲ್ಲ.