ಹತ್ಯೆಯಾದ ಆರ್'ಎಸ್ಎಸ್ ಕಾರ್ಯಕರ್ತ ರಾಜೇಶ್
ತಿರುವನಂತಪುರ: ಕೇರಳದಲ್ಲಿ ಮತ್ತೊಬ್ಬ ಆರ್'ಎಸ್ಎಸ್ ಕಾರ್ಯಕರ್ತನನ್ನು ಗುಂಪೊಂದು ಮಚ್ಚಿನಿಂದ ಕೊಚ್ಚಿ ಶನಿವಾರ ಹತ್ಯೆ ಮಾಡಿದೆ.
ರಾತ್ರಿ 9 ಗಂಟೆ ವೇಳೆಗೆ ಆರ್'ಎಸ್ಎಸ್ ಕಾರ್ಯಕರ್ತ ರಾಜೇಶ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದ ಗುಂಪು, ಆತನ ಎಡಗೈಯನ್ನು ಕತ್ತರಿಸಿದೆ. ದಾಳಿ ನಡೆಸಿದವರ ಪತ್ತೆಗೆಗಾಗಿ ಪೊಲೀಸರು ಇದೀಗ ಹುಡುಕಾಟ ಆರಂಭಿಸಿದ್ದಾರೆ.
ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ರಾಜೇಶ್ ಅವರು ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ತೆರಳುತ್ತಿದ್ದರು. ಈ ವೇಳೆ 15 ಜನರಿದ್ದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳೊಂದಿಗೆ ರಾಜೇಶ್ ಮೇಲೆ ಮುಗಿಬಿದ್ದು ದಾಳಿ ನಡೆಸಿದೆ. ಪ್ರತಿದಾಳಿಗೆ ಕೆಲ ಆರ್'ಎಸ್ಎಸ್ ಕಾರ್ಯಕರ್ತರೂ ಕೂಡ ಮುಂದಾಗಿದ್ದಾರೆ. ಆದರೆ, ಕಡಿಮೆ ಕಾರ್ಯಕರ್ತರಿದ್ದರು ಎಂದು
ಹೇಳಲಾಗುತ್ತಿದೆ. ದಾಳಿಯಲ್ಲಿ ರಾಜೇಶ್ ಅವರ ದೇಹದ ಮೇಲೆ 40ಕ್ಕೂ ಹೆಚ್ಚು ಗಂಭೀರವಾದ ಗಾಯಗಳಾಗಿವೆ. ರಾಜೇಶ್ ಅವರ ಕೈಗಳನ್ನು ಕತ್ತರಿಸಿದ್ದ ದುಷ್ಕರ್ಮಿಗಳು, ಕೈಗಳನ್ನು ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ.
ನಂತರ ರಾಜೇಶ್ ಅವರನ್ನು ಸ್ಥಳೀಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ತುರ್ತು ಶಸ್ತ್ರಚಿಕಿತ್ಸೆ ವೇಳೆ ರಾಜೇಶ್ ಅವರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಕೇರಳ ಬಿಜೆಪಿ ಅಧ್ಯಕ್ಷ ಕುಮಾನಂ ರಾಜಶೇಖರನ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ನಂತರ ಪ್ರತಿಕ್ರಿಯೆ ನೀಡಿದ ಅವರು, ದಾಳಿಯ ಸಿಪಿಎಂ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಪ್ರಕರಣವನ್ನು ಪ್ರಧಾನಮಂತ್ರಿ, ಗೃಹ ಸಚಿವರು ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಗಮನಕ್ಕೆ ತರಲಾಗುತ್ತದೆ ಎಂದಿದ್ದಾರೆ.
ಇನ್ನು ಕುಮಾನಂ ಅವರು ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಸಿಪಿಎಂ, ಆರ್'ಎಸ್ಎಸ್ ಕಾರ್ಯಕರ್ತನ ಮೇಲಿನ ದಾಳಿಗೂ ಸಿಪಿಎಂಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡಿದೆ.
ಘಟನೆ ಖಂಡಿಸಿ ಬಿಜೆಪಿ ಇಂದು ರಾಜ್ಯ ವ್ಯಾಪ್ತಿ ಪ್ರತಿಭಟನೆಗೆ ಕರೆ ನೀಡಿದೆ. ಬಂದ್ ಕರೆ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿರುವ ಕೇರಳ ರಾಜ್ಯ ಸರ್ಕಾರ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದೆ.