ಜೆಡಿಯು ನಾಯಕ ಶರದ್ ಯಾದವ್ ಮತ್ತು ಬಿಹಾರ ರಾಜ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್
ಪಾಟ್ನ: ಅಸಂತುಷ್ಟಿಯ ಮಾತುಗಳು ಬೇಡ, ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸೋಣ ಎಂದು ಜೆಡಿಯು-ಬಿಜೆಪಿ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಜೆಡಿಯು ನಾಯಕ ಶರದ್ ಯಾದವ್ ಅವರಿಗೆ ಬಿಹಾರ ರಾಜ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.
ಕಳೆದೆರಡು ದಿನಗಳ ಹಿಂದಷ್ಟೇ ನಿತೀಶ್ ಕುಮಾರ್ ಅವರ ನಿರ್ಧಾರ ಕುರಿತಂತೆ ಅಸಮಾಧಾನ ಹೊರಹಾಕಿದ್ದ ಶರದ್ ಯಾದವ್ ಅವರು ಆರ್'ಜೆಡಿ, ಕಾಂಗ್ರೆಸ್ ಜೊತೆಗಿನ ಮಹಾಮೈತ್ರಿ ತೊರೆದು ಎನ್ ಡಿಎ ಪಕ್ಷದ ಜೊತೆಗೆ ಮತ್ತೆ ಸಖ್ಯ ಬೆಳೆಸಿಕೊಂಡ ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವುದನ್ನು ಒಪ್ಪಲಾಗುವುದಿಲ್ಲ. ಇದು ದುರಾದೃಷ್ಟಕರ. ಬಿಹಾರ ರಾಜ್ಯದಲ್ಲಿನ ಸದ್ಯದ ಪರಿಸ್ಥಿತಿ ನನಗೆ ಬೇಸರ ಉಂಟು ಮಾಡಿದೆ ಎಂದು ಹೇಳಿದ್ದರು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ನಿತೀಶ್ ಕುಮಾರ್ ಅವರು, ಅಸಂತುಷ್ಟಿಯ ಮಾತುಗಳು ಬೇಡ. ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸೋಣ. ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನಾ ಪಕ್ಷಕ್ಕೆ ಯಾವುದು ಉತ್ತಮ ಎಂಬುದನ್ನು ತಲೆಯಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಿ ಎಂದಿದ್ದಾರೆ.
ಲಾಲೂ ಪ್ರಸಾದ್ ಯಾದವ್ ಅವರ ಜೊತೆಗಿನ ಮಹಾಮೈತ್ರಿ ಮುರಿಯುವುದಕ್ಕೂ ಮುನ್ನ ನಾನು ಶರದ್ ಯಾದವ್ ಅವರನ್ನು ಸಂಪರ್ಕಿಸಿ, ಮಾತುಕತೆ ನಡೆಸಿದ್ದೆ. ಬಿಜೆಪಿಯ ಬೆಂಬಲ ಕೇಳಿರುವ ಬಗ್ಗೆಯೂ ಹೇಳಿದ್ದೆ ಎದು ತಿಳಿಸಿದ್ದಾರೆ.
ಸಂಯುಕ್ತ ಜನತಾ ದಳ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಪಾಟ್ನದಲ್ಲಿ ಆಗಸ್ಟ್ 19 ರಂದು ನಡೆಯಲಿದ್ದು, ಸಭೆಯಲ್ಲಿ ಪಕ್ಷ ಆಡಳಿತಾರೂಢ ಎನ್ ಡಿಎ ಸರ್ಕಾರದೊಂದಿಗೆ ಕೈಜೋಡಿಸಬೇಕೋ, ಇಲ್ಲವೋ ಎಂಬುದರ ಬಗ್ಗೆಯೂ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics