ದೇಶ

ಲೋಕೋಪಯೋಗಿ ಹಗರಣ: ದೆಹಲಿ ಸಿಎಂ ಕೇಜ್ರಿವಾಲ್ ವಿರುದ್ಧ ಮೂರು ಎಫ್ಐಆರ್ ದಾಖಲು

Lingaraj Badiger
ನವದೆಹಲಿ: ಲೋಕೋಪಯೋಗಿ ಇಲಾಖೆಯಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಇತರರ ವಿರುದ್ಧ ಮೂರು ಪ್ರತ್ಯೇಕ ಎಫ್ಐಆರ್ ದಾಖಲಿಸಿರುವುದಾಗಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಶುಕ್ರವಾರ ಕೋರ್ಟ್ ಗೆ ತಿಳಿಸಿದೆ.
ಭ್ರಷ್ಟಾಚಾರ ವಿರೋಧಿ ಹೋರಾಟಗಾರ ರಾಹುಲ್ ಶರ್ಮಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಎಸಿಬಿ ಮೊಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಮಾಹಿತಿ ನೀಡಿದ್ದು, ಮೇ 8ರಂದು ದೆಹಲಿ ಸಿಎಂ ಹಾಗೂ ಇತರರ ವಿರುದ್ಧ ಮೂರು ಎಫ್ಐಆರ್ ದಾಖಿಸಿರುವುದಾಗಿ ಎಸಿಬಿ ಹೇಳಿದೆ.
ಇದೇ ವೇಳೆ ಮೊಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಅಭಿಲಾಶ್ ಮಲ್ಹೊತ್ರಾ ಅವರು, ದೂರುದಾರ ರಾಹುಲ್ ಶರ್ಮಾ ಮೇಲೆ ಇತ್ತೀಚಿಗೆ ನಡೆದ ಗುಂಡಿನ ದಾಳಿ ಬಗ್ಗೆ ಮತ್ತು ಬೆದರಿಕೆ ಬಗ್ಗೆ ಪರೀಶಿಲಿಸುವಂತೆ ಎಸಿಬಿಗೆ ಸೂಚಿಸಿದ್ದಾರೆ. ಅಲ್ಲದೆ ಜೂನ್ 8ರಂದು ಈ ಸ್ಥಿತಿಗತಿ ವರದಿ ನೀಡುವಂತೆ ಆದೇಶಿಸಿದ್ದಾರೆ.
ರಸ್ತೆ ಗುತ್ತಿಗೆಯಲ್ಲಿ ಹಾಗೂ ಒಳಚರಂಡಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಸಂಬಂಧ ದೆಹಲಿ ಮುಖ್ಯಮಂತ್ರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಬೇಕು ಎಂದು ಕೋರಿ ರಾಹುಲ್ ಶರ್ಮಾ ಅವರು ಕೋರ್ಟ್ ಅರ್ಜಿ ಸಲ್ಲಿಸಿದ್ದರು.
SCROLL FOR NEXT