ತಿರುವನಂತಪುರ: ಗೋಮಾರಾಟ ನಿಷೇಧ ನಿಯಮ ಜಾರಿಗೆ ತರುವ ಮೂಲಕ ಆರ್ ಎಸ್ ಎಸ್ ನ ತತ್ವ ಸಿದ್ಧಾಂತಗಳನ್ನು ಹೇರುವುದು ಬಿಜೆಪಿಯ ರಾಜಕೀಯ ಅಜೆಂಡಾವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗೋಮಾರಾಟ ನಿಷೇಧ ಕಾಯಿದೆ ಬಗ್ಗೆ ಚರ್ಚಿಸಲು ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಕೇಂದ್ರದ ಈ ನಿರ್ಧಾರ ದೇಶದ ಆರ್ಥಿಕತೆ ಮತ್ತು ರೈತರಿಗೆ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ. ಪ್ರತಿ ವರ್ಷ ರಾಜ್ಯಕ್ಕೆ 15 ಲಕ್ಷ ಹಸುಗಳನ್ನು ತರಲಾಗುತ್ತದೆ. ಆದರೆ ಕೇಂದ್ರದ ನಿಯಮದಿಂದ ಜಾನುವಾರುಗಳ ಸಾಗಾಟ ನಿಲ್ಲಿಸಲಾಗಿದೆ. ಪೌಷ್ಟಿಕತೆಗಾಗಿ ಹಲವಾರು ಮಂದಿ ಇದನ್ನು ಬಳಸುತ್ತಾರೆ. ಈ ನೀತಿಯಿಂದಾಗಿ ಜನತೆ ಮೇಲೆ ದೀರ್ಘಕಾಲದ ಪರಿಣಾ ಉಂಟಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಸಾಯಿ ಖಾನೆ ಹಾಗೂ ಮಾರಾಟ ಉದ್ಯಮದಲ್ಲಿ ಸುಮಾರು 5 ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ. ಗೋ ಹತ್ಯೆ ನಿಷೇಧ ಮಾಡುವುದು ಆರ್ ಎಸ್ ಎಸ್ ಅಜೆಂಡಾವಾಗಿದೆ. ಸಂಘ ಪರಿವಾರದ ತತ್ವ ಸಿದ್ಧಾಂತಗಳನ್ನು ಬಲವಂತವಾಗಿ ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮುಂದಿನ ದಿನಗಳಲ್ಲಿ ಹಾಲಿನ ಬೇಡಿಕೆ ಹೆಚ್ಚಿ ಪೂರೈಕೆ ಕಡಿಮೆಯಾಗುವುದರಿಂದ ಹಾಲಿನ ಬೆಲೆ ಏರಿಕೆಯಾಗಲಿದೆ.ರೈತರು ಈಗಾಗಲೇ ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ರಾಜ್ಯಕ್ಕೆ ಹೊರಗಿನಿಂದ ಹಸುಗಳನ್ನು ತರಲಾಗುತ್ತಿತ್ತು. ಕೇಂದ್ರ ಈ ನೀತಿಯಿಂದಾಗಿ ಮಾಂಸದ ಬೆಲೆ ಕೂಡ ಏರಿಕೆಯಾಗಲಿದೆ ಎಂದು ಪಿಣರಾಯಿ ವಿಜಯನ್ ಅಭಿಪ್ರಾಯ ಪಟ್ಟಿದ್ದಾರೆ.