ಪಾಟ್ನಾ: ಮಧ್ಯಪ್ರದೇಶದಲ್ಲಿ ರೈತರು ಗೋಲಿಬಾರ್ ಗೆ ಗುರಿಯಾಗಿ ಸಾವನ್ನಪ್ಪಿದ್ದರೆ, ಪರಿಸ್ಥಿತಿಯ ಬಗ್ಗೆ ನಿಗಾ ವಹಿಸಬೇಕಾದ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಯೋಗ ನಿರತರಾಗಿದ್ದರು. ಕೇಂದ್ರ ಸಚಿವರ ಈ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಬಿಹಾರದಲ್ಲಿ ಆಯೋಜಿಸಲಾಗಿದ್ದ ಬಾಬಾ ರಾಮ್ ದೇವ್ ಅವರ ಯೋಗ ಕ್ಯಾಂಪ್ ಗೆ ತೆರಳಿದ್ದ ರಾಧಾ ಮೋಹನ್ ಸಿಂಗ್ ಅವರನ್ನು ಪ್ರಶ್ನಿಸಿದ ಪತ್ರಕರ್ತರಿಗೆ ಕೇಂದ್ರ ಸಚಿವರು ಹೆಚ್ಚು ತಲೆಕೆಡಿಸಿಕೊಳ್ಳಬೇಡಿ, ಯೋಗಾಭ್ಯಾಸ ಮಾಡಿ ಎಂಬ ಉಚಿತ ಸಲಹೆ ನೀಡಿದ್ದಾರೆ. ಕೃಷಿ ಸಚಿವರ ಈ ಹೇಳಿಕೆ, ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಬಿಹಾರದ ಆಡಳಿತ ಪಕ್ಷಗಳಾದ ಜೆಡಿಯು, ಆರ್ ಜೆಡಿ ರಾಧಾ ಮೋಹನ್ ಸಿಂಗ್ ಅವರ ನಡೆಯನ್ನು ಖಂಡಿಸಿವೆ.
ರೈತರ ಬಗ್ಗೆ ಬಿಜೆಪಿಗೆ ಇರುವ ನಿಜವಾದ ಕಾಳಜಿಯನ್ನು ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಬಯಲು ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವುದರ ಬದಲು ಯೋಗಾಭ್ಯಾಸದಲ್ಲಿ ಆನಂದದಿಂದ ಕಾಲಕಳೆಯುತ್ತಿದ್ದಾರೆ ಎಂದು ಜೆಡಿಯು ವಕ್ತಾರ ನೀರಜ್ ಕುಮಾರ್ ಹೇಳಿದ್ದರೆ, ನಾವು ಎಂಥಹ ಕೃಷಿ ಸಚಿವರನ್ನು ಹೊಂದಿದ್ದೇವೆ ಎಂದು ಆರ್ ಜೆಡಿ ವಕ್ತಾರ ಪ್ರಗತಿ ಮೆಹ್ತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.