ದೇಶ

"ಎಫ್ -16" ಇನ್ನು ಮೇಡ್ ಇನ್ ಅಮೆರಿಕ ಅಲ್ಲ, ಮೇಡ್ ಇನ್ ಇಂಡಿಯಾ!

Srinivasamurthy VN

ನವದೆಹಲಿ: ವಿಶ್ವದ ಅತ್ಯುತ್ತಮ ಯುದ್ಧವಿಮಾನಗಳಲ್ಲಿ ಒಂದು ಖ್ಯಾತಿ ಪಡೆದಿರುವ ಎಫ್-16 ಯುದ್ಧ ವಿಮಾನ ಇನ್ನು ಮುಂದೆ ಭಾರತದಲ್ಲೇ ತಯಾರಾಗಲಿದೆ. ಈ ಸಂಬಂಧ ಲಾಕ್' ಹೀಡ್ ಮಾರ್ಟಿನ್ ಮತ್ತು ಟಾಟಾ ಅಡ್ವಾನ್ಸ್`ಡ್  ಸಿಸ್ಟಮ್ಸ್ ಸಂಸ್ಥೆಗಳ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ತಿಳಿದುಬಂದಿದೆ.

ಅತ್ಯಾಧುನಿಕ ಮತ್ತು ಶಕ್ತಿಶಾಲಿ ಎಫ್-16 ಫೈಟರ್ ಪ್ಲೇನ್'ಗಳನ್ನ ಭಾರತದಲ್ಲಿ ತಯಾರಿಸಲು ಅಮೆರಿಕದ ಲಾಕ್'ಹೀಡ್ ಮಾರ್ಟಿನ್ ಸಂಸ್ಥೆ ಹಾಗೂ ಭಾರತದ ಟಾಟಾ ಅಡ್ವಾನ್ಸ್`ಡ್ ಸಿಸ್ಟಮ್ಸ್ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿವೆ.   ಪ್ಯಾರಿಸ್ ಏರ್'ಶೋ ವೇಳೆ ಈ ಒಪ್ಪಂದವನ್ನು ಎರಡೂ ಸಂಸ್ಥೆಗಳು ಪ್ರಕಟಿಸಿದ್ದು, ವಿಮಾನ ಕೈಗಾರಿಕಾ ವಲಯದಲ್ಲೇ ಇದೊಂದು ಐತಿಹಾಸಿಕ ಒಪ್ಪಂದ ಎಂದು ಬಣ್ಣಿಸಲಾಗುತ್ತಿದೆ. ಈ ಒಪ್ಪಂದದ ಅನ್ವಯ ಅಮೆರಿಕದ ಟೆಕ್ಸಾಸ್ ನ  ಪೋರ್ಟ್ ಪರ್ಥ್ ನಲ್ಲಿರುವ ನಿರ್ಮಾಣ ಘಟಕ ಭಾರತಕ್ಕೆ ವರ್ಗಾವಣೆಯಾಗುತ್ತಿದೆ.

ಎಫ್-16 ವಿಮಾನ ನಿರ್ಮಾಣ ಘಟಕವನ್ನೇ ವಿದೇಶಕ್ಕೆ ವರ್ಗಾಯಿಸುವ ಈ ಒಪ್ಪಂದವನ್ನು ಐತಿಹಾಸಿಕ ಎಂದು ಬಣ್ಣನೆ ಮಾಡಲಾಗುತ್ತಿದೆ. ಇನ್ನು ಪ್ರಸ್ತುತ ಅಮೆರಿಕದಲ್ಲಿರುವ ಎಫ್-16 ಯುದ್ಧ ವಿಮಾನ ಘಟಕ ಭಾರತಕ್ಕೆ  ಸ್ಥಳಾಂತರಗೊಳ್ಳುವುದರಿಂದ ಅಮೆರಿಕದಲ್ಲಿ ಸಾವಿರಾರು ಉದ್ಯೋಗ ನಷ್ಟವಾಗಲಿದ್ದು, ಭಾರತದಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಲಿದೆ ಎಂದು ಹೇಳಲಾಗುತ್ತಿದೆ. ಅಂತೆಯೇ ರಕ್ಷಣಾ ಕ್ಷೇತ್ರದ ಅತ್ಯಾಧುನಿಕತೆಗೆ ಮತ್ತು ರಕ್ಷಣಾ  ಉಪಗಕರಣಗಳನ್ನು ವಿದೇಶಕ್ಕೆ ರಫ್ತು ಮಾಡುವ ಭಾರತದ ಕನಸಿಗೆ ಪುಷ್ಟಿ ನೀಡಲಿದೆ.

ಎಫ್-16 ಖರೀದಿ ಕುರಿತು ಭಾರತ ಭರವಸೆ ಹಿನ್ನಲೆಯಲ್ಲಿ ಘಟಕ ವರ್ಗಾವಣೆಗೆ ನಿರ್ಧಾರ
ಮತ್ತೊಂದು ಪ್ರಮುಖ ಅಂಶವೆಂದರೆ ಅತ್ಯಾಧುನಿಕ ವಿಮಾನಗಳನ್ನು ಹೊಂದುವ ಭಾರತೀಯ ಸೇನೆಯ ಮನವಿ ಮೇರೆಗೆ ಕೇಂದ್ರ ಸರ್ಕಾರ ಎಫ್-16 ಯುದ್ಧ ವಿಮಾನಗಳನ್ನು ಖರೀದಿ ಮಾಡುವ ನಿರ್ಧಾರಕ್ಕೆ ಬಂದಿತ್ತು. ಈ ಬಗ್ಗೆ  ಎಫ್-16 ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಲಾಕ್ ಹೀಡ್ ಮಾರ್ಟಿನ್ ನೊಂದಿಗೆ ಚರ್ಚೆ ಕೂಡ ನಡೆಸಿತ್ತು. ಇದೇ ಕಾರಣಕ್ಕಾಗಿ ಲಾಕ್ ಹೀಡ್ ಮಾರ್ಟಿನ್ ತನ್ನ ವಿಮಾನ ತಯಾರಿಕಾ ಘಟಕವನ್ನು ಭಾರತಕ್ಕೆ ವರ್ಗಾವಣೆ ಮಾಡವು  ನಿರ್ಧರಿಸಿದೆ. ಅಂತೆಯೇ ಭಾರತದಲ್ಲಿನ ಸಂಪನ್ಮೂಲ ಹಾಗೂ ದರ ಇಳಿಕೆ ವಿಚಾರಗಳು ಸಂಸ್ಥೆಗೆ ಲಾಭದಾಯಕ ಎಂದು ಲಾಕ್ ಹೀಡ್ ಮಾರ್ಟಿನ್ ಘಟಕ ವರ್ಗಾವಣೆಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಪ್ಯಾರಿಸ್(ಜೂನ್ 19): ಅತ್ಯಾಧುನಿಕ ಮತ್ತು ಶಕ್ತಿಶಾಲಿ ಎಫ್-16 ಫೈಟರ್ ಪ್ಲೇನ್'ಗಳನ್ನ ಭಾರತದಲ್ಲಿ ತಯಾರಿಸಲು ಅಮೆರಿಕದ ಲಾಕ್'ಹೀಡ್ ಮಾರ್ಟಿನ್ ಸಂಸ್ಥೆ ಹಾಗೂ ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಸಂಸ್ಥೆಗಳು  ಒಪ್ಪಂದಕ್ಕೆ ಸಹಿ ಹಾಕಿವೆ. ಇದರೊಂದಿಗೆ ಭಾರತದ ರಕ್ಷಣಾ ಕ್ಷೇತ್ರಕ್ಕೆ ಭರ್ಜರಿಯಾಗಿ ಪುಷ್ಟಿ ಸಿಗಲಿದೆ.

ರಫ್ತು ಮಾಡುವ ಅವಕಾಶ ಭಾರತಕ್ಕಿದೆ
ಭಾರತದಲ್ಲಿ ಎಷ್ಟು ಎಫ್-16 ವಿಮಾನಗಳನ್ನು ತಯಾರಿಸಲಾಗುವುದು ಎಂಬುದು ಖಚಿತವಾಗಿಲ್ಲ. ಇನ್ನೂ ಕೂಡ ಬಿಡ್ಡಿಂಗ್ ಕರೆಯಬೇಕಿದೆ. 100-250 ಯುದ್ಧವಿಮಾನಗಳ ಉತ್ಪಾದನೆ ನಡೆಯುವ ಸಾಧ್ಯತೆ ಇದೆ. ಭಾರತವು ಈ ಜೆಟ್  ವಿಮಾನಗಳನ್ನ ಬೇರೆ ದೇಶಗಳಿಗೆ ಮಾರಾಟ ಮಾಡುವ ಹಕ್ಕನ್ನು ಈ ಒಪ್ಪಂದಲ್ಲಿ ನೀಡಿರುವುದು ಗಮನಾರ್ಹ. ಭಾರತದಲ್ಲಿ ಉತ್ಪಾದನೆಯಾಗುತ್ತಿರುವುದರಿಂದ ಖರ್ಚು ಕಡಿಮೆಯಾಗುತ್ತದೆ. ಈ ವಿಮಾನಗಳ ಮರುಮಾರಾಟದ  ಮೂಲಕ ನಾವು ಲಾಭ ಮಾಡಿಕೊಳ್ಳಲು ಸಾಧ್ಯವಿದೆ.

ಯೋಜನೆಗೆ ಟ್ರಂಪ್ ಕೊಕ್ಕೆ ಸಾಧ್ಯತೆ

ಎಫ್-16 ಯುದ್ಧವಿಮಾನ ತಯಾರಿಕೆ ಒಪ್ಪಂದಕ್ಕೆ ಟ್ರಂಪ್ ಯಾವಾಗ ಬೇಕಾದರೂ ಕೊಕ್ಕೆ ಹಾಕುವ ಅಪಾಯವಿದೆ. ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಇಬ್ಬರ ಬ್ಯುಸಿನೆಸ್ ಧೋರಣೆ ಒಂದೇ ತೆರನಾಗಿವೆ. ಮೋದಿಯದ್ದು  ಮೇಡ್ ಇನ್ ಇಂಡಿಯಾ ಕಾನ್ಸೆಪ್ಟ್ ಆದರೆ, ಟ್ರಂಪ್'ರದ್ದು ಅಮೆರಿಕ ಫಸ್ಟ್ ಪಾಲಿಸಿ. ಹೀಗಾಗಿ, ಎಫ್-16 ವಿಮಾನ ತಯಾರಿಕೆಯ ಒಪ್ಪಂದದಲ್ಲಿ ಬಹುತೇಕ ಉದ್ಯೋಗಗಳು ಭಾರತದ ಪಾಲಾಗುವ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್  ಇದಕ್ಕೆ ತಡೆಯೊಡ್ಡುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.

ಎಫ್-16 ಸ್ಪೆಷಾಲಿಟಿ
ಅಮೆರಿಕದ ಎಫ್-16 ವಿಶ್ವದ ಅತ್ಯುತ್ತಮ ಯುದ್ಧವಿಮಾನಗಳಲ್ಲಿ ಪ್ರಮುಖವಾದುದು. ಭಾರತ ಒಪ್ಪಂದ ಮಾಡಿಕೊಂಡಿರುವ ಎಫ್-16 ಮಾಡೆಲ್ ಇರುವುದರಲ್ಲೇ ಅತ್ಯಾಧುನಿಕವಾದುದು. ಬ್ಲಾಕ್ 70 ಮಾಡೆಲ್'ನ ಎಫ್-16  ಯುದ್ಧವಿಮಾನಗಳು ಈಗಾಗಲೇ ಸಾಕಷ್ಟು ಯುದ್ಧಗಳಲ್ಲಿ ಯಶಸ್ವಿಯಾಗಿ ಬಳಕೆಯಾಗಿ ತಮ್ಮ ತಾಕತ್ತು ಸಾಬೀತುಪಡಿಸಿವೆ. 26 ರಾಷ್ಟ್ರಗಳು ಸದ್ಯ ಎಫ್-16 ಯುದ್ಧವಿಮಾನಗಳನ್ನ ಹೊಂದಿವೆ. ಒಂದು ಅಂದಾಜಿನಂತೆ ವಿಶ್ವಾದ್ಯಂತ  3200 ಎಫ್-16 ಜೆಟ್ ಯುದ್ಧವಿಮಾನಗಳಿವೆ. ಸಂಸ್ಥೆಯ ಮೂಲಗಳ ಪ್ರಕಾರ ಈ ವರೆಗೂ 4573 ಯುದ್ಧ ವಿಮಾನಗಳನ್ನು ತಯಾರಿಸಲಾಗಿದೆ. ಒಂದು ವಿಮಾನದ ತಯಾರಿಕೆಗೆ ಸುಮಾರು 1 ಸಾವಿರ ಕೋಟಿ ವೆಚ್ಚವಾಗಲಿದೆ. ಒಂದು  ವಿಮಾನ ಒಂದು ಗಂಟೆ ಹಾರಾಟ ನಡೆಸಲು 15 ಲಕ್ಷ ರು.ಗಳ ವೆಚ್ಚವಾಗುತ್ತದೆ.

SCROLL FOR NEXT