ನವದೆಹಲಿ: ಸಿಕ್ಕಿಂ ಸೆಕ್ಟರ್ ನ ದೋಕಾ ಲಾ ಪ್ರದೇಶದಲ್ಲಿ ಚೀನಾದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂತಾನ್ ಪ್ರತಿಭಟನೆ ವ್ಯಕ್ತಪಡಿಸಿದೆ.
ದೋಕಾ ಲಾ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಮಾಡುತ್ತಿರುವುದು ನ್ಯಾಯಸಮ್ಮತವಾಗಿದೆ ಎಂಬ ಚೀನಾದ ಸಮರ್ಥನೆಯನ್ನು ನಿರಾಕರಿಸಿರುವ ಭೂತಾನ್, ತಕ್ಷಣವೇ ಭೂತಾನ್ ನ ಆರ್ಮಿ ಕ್ಯಾಂಪ್ ಬಳಿ ನಡೆಯುತ್ತಿರುವ ಕಾಮಗಾರಿಯನ್ನು ಹಿಂಪಡೆಯಬೇಕೆಂದು ಚೀನಾಗೆ ನೀಡಿರುವ ರಾಜತಾಂತ್ರಿಕ ದೂರಿನಲ್ಲಿ ಆಗ್ರಹಿಸಿದೆ.
ಚೀನಾ ಎರಡು ರಾಷ್ಟ್ರಗಳ ನಡುವಿನ ಒಪ್ಪಂದವನ್ನು ಮುರಿದಿದೆ ಎಂದು ಭೂತಾನ್ ನ ಭಾರತದ ರಾಯಭಾರಿ ವೆಟ್ಸಾಪ್ ನಮ್ಜಿಲ್ ಹೇಳಿದ್ದು, ದೋಕಾ ಲಾ ವಿವಾದಿತ ಪ್ರದೇಶವಾಗಿದ್ದು, ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭೂತಾನ್ ಹಾಗೂ ಚೀನಾ ವಿವಾದಿತ ಗಡಿ ಪ್ರದೇಶದಲ್ಲಿ ಶಾಂತಿಯುತ ವಾತಾವರಣ ಕಾಪಾಡಬೇಕು ಎಂಬ ಒಪ್ಪಂದ ಹೊಂದಿದೆ. ಆದರೆ ಚೀನಾ ವಿವಾದಿತ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲು ಪ್ರಾರಂಭಿಸಿ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಭೂತಾನ್ ಆಕ್ಷೇಪ ವ್ಯಕ್ತಪಡಿಸಿದೆ.
ದೋಕಾ ಲಾ ಚೀನಾಗೆ ಸೇರಿರುವ ಪ್ರದೇಶವಾಗಿದೆ. ಅದು ಭೂತಾನ್ ಗೂ ಸೇರಿಲ್ಲ, ಭಾರತದ್ದೂ ಅಲ್ಲ, ಸಿಕ್ಕೀಂ ಸೆಕ್ಟರ್ ನ ದೋಕಾ ಲಾ ಪ್ರದೇಶದಲ್ಲಿ ಚೀನಾದ ರಸ್ತೆ ನಿರ್ಮಾಣ ಕಾಮಗಾರಿ ನ್ಯಾಯ ಸಮ್ಮತವಾಗಿದೆ ಎಂದು ಚೀನಾ ಸಮರ್ಥನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಭೂತಾನ್ ಚೀನ ವಿರುದ್ಧ ರಾಜತಾಂತ್ರಿಕ ಪ್ರತಿಭಟನೆಯೊಡ್ಡಿದೆ.