ನವದೆಹಲಿ: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಎಂದರೆ ಪ್ರತಿಭೆಗಳ ಆಗರ. ಬಾಲಿವುಡ್ ನ ಹೆಸರಾಂತ ನಟ ಸಿನಿಮಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಬಿಗ್ ಬಿಗೆ ಟ್ವಿಟ್ಟರ್ ನಲ್ಲಿಯೂ ಕೋಟ್ಯಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಟ್ವಿಟ್ಟರ್ ನಲ್ಲಿ ಸದಾ ಸಕ್ರಿಯವಾಗಿರುವ ಅವರು, ಇತ್ತೀಚೆಗೆ ಒಂದು ಪೋಸ್ಟ್ ನ್ನು ಅಪ್ ಲೋಡ್ ಮಾಡಿದ್ದರು. ಅದರಲ್ಲಿರುವ ಸಂದೇಶ ಖಂಡಿತವಾಗಿಯೂ ನಮ್ಮ ದೇಶದಲ್ಲಿ ಹಲವರ ಯೋಚನಾಲಹರಿಯನ್ನು ಬದಲಾಯಿಸುವುದರಲ್ಲಿ ಸಂಶಯವಿಲ್ಲ. ಅಂತಹದ್ದೊಂದು ಗಟ್ಟಿ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಕೆಲಸವನ್ನು ಬಿಗ್ ಬಿ ಮಾಡಿದ್ದಾರೆ.
ಅಮಿತಾಬ್ ಬಚ್ಚನ್ ಚಿತ್ರವೊಂದನ್ನು ಷೇರ್ ಮಾಡಿದ್ದು, ಅದರಲ್ಲಿ ಅವರು ಬಿಳಿ ಫಲಕವೊಂದನ್ನು ಹಿಡಿದುಕೊಂಡಿದ್ದಾರೆ. ಅದರಲ್ಲಿ ಹೀಗೆ ಬರೆದಿದೆ: ನಾನು ಸತ್ತ ಮೇಲೆ, ನಾನು ಬಿಟ್ಟು ಹೋಗುವ ಆಸ್ತಿಯನ್ನು ನನ್ನ ಮಗ ಮತ್ತು ಮಗಳಿಗೆ ಸಮಾನವಾಗಿ ಹಂಚಬೇಕು ಎಂದು ಬರೆದು ಲಿಂಗ ಸಮಾನತೆ, ನಾವು ಸಮಾನರು ಎಂದು ಬರೆದು ಹ್ಯಾಶ್ ಟ್ಯಾಗ್ ಮಾಡಿದ್ದಾರೆ.
ಎಲ್ಲಾ ರಂಗಗಳಲ್ಲಿ ಬೆಳವಣಿಗೆ ಆಗುತ್ತಿದ್ದರೂ ಕೂಡ ನಮ್ಮ ದೇಶದಲ್ಲಿ ಇನ್ನೂ ಕೂಡ ಲಿಂಗ ಅಸಮಾನತೆ ಕಂಡುಬರುತ್ತಿರುವ ಸಂದರ್ಭದಲ್ಲಿ ಇಂತಹ ಖ್ಯಾತ ವ್ಯಕ್ತಿಗಳ ಸಂದೇಶಗಳು ಖಂಡಿತಾ ಸ್ಫೂರ್ತಿ ಉಂಟುಮಾಡಬಹುದು.