ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್
ಜಾನ್ಪುರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್' ವಿರುದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಗುಡುಗಿದ್ದು, ಮನ್ ಕಿ ಬಾತ್ ಸಾಕು, ಇದು ಕಾಮ್ ಕಿ ಬಾತ್ ಆಡುವ ಸಮಯ ಎಂದು ಸೋಮವಾರ ಹೇಳಿದ್ದಾರೆ.
ಉತ್ತರಪ್ರದೇಶದ ರ್ಯಾಲಿಯಲ್ಲಿ ಮಾತನಾಡಿರುವ ಅಖಿಲೇಶ್ ಯಾದವ್ ಅವರು ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಿಡಿಕಾರಿದ್ದಾರೆ. ಮೋದಿಯವರು ಸಾಕಷ್ಟು ಮನ್ ಕಿ ಬಾತ್ ಗಳನ್ನು ಆಡಿದ್ದಾರೆ. ಆದರೆ, ಜನರು ಮೋದಿಯವರ ಮನ್ ಕಿ ಬಾತ್ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಇದೀಗ ನಾವು ಅವರಿಗೆ ಹೇಳಬೇಕಿದೆ. ಮನ್ ಕಿ ಬಾತ್ ಸಾಕು, ಇದು ಕಾಮ್ ಕಿ ಬಾತ್ ಆಡುವ ಸಮಯ ಎಂದು ತಿಳಿಸಬೇಕಿದೆ ಎಂದು ಹೇಳಿದ್ದಾರೆ.
ವಾರಣಾಸಿಯಲ್ಲಿ ಒಂದರ ಹಿಂದೆ ಒಂದರಂತೆ ಪ್ರಧಾನಿ ಮೋದಿಯವರು ರ್ಯಾಲಿಯಲ್ಲಿ ಭಾಗಿಯಾಗುತ್ತಿರುವುದಕ್ಕೆ ಹತಾಶೆಗೊಂಡು ಮಾತನಾಡಿರುವ ಅವರು, ಬಿಜೆಪಿಗೆ ಯಾವುದೇ ರೀತಿಯ ಅಜೆಂಡಾಗಳನ್ನು ಇಟ್ಟುಕೊಂಡಿಲ್ಲ. ಜನರು ಅವರನ್ನು ನಂಬಬಾರದು ಎಂದಿದ್ದಾರೆ.
ಅಚ್ಛೇ ದಿನ ಕುರಿತಂತೆ ನೀಡಿದ್ದ ಯಾವುದೇ ಭರವಸೆಗಳನ್ನು ಮೋದಿ ಈಡೇರಿಸಿಲ್ಲ. ರಾಜ್ಯದಲ್ಲಿ ಸಮಾಜವಾದಿ ಪಕ್ಷ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಅ್ಯಂಬುಲೆನ್ಸ್ ಸೇವೆ, 100 ಸಂಖ್ಯೆಯನ್ನು ಪೊಲೀಸರಿಗೆ ಮೀಸಲಿಟ್ಟಿದೆ,ವೈದ್ಯಕೀಯ ಕಾಲೇಜುಗಳನ್ನು ಸ್ಥಾಪನೆ ಮಾಡಿದೆ ಹಾಗೂ ರಸ್ತೆಗಳ ನಿರ್ಮಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಅಚ್ಛೇ ದಿನದ ಭರವಸೆ ನೀಡಿದವರು ಯಾವುದೇ ಭರವಸೆಯನ್ನೂ ಈಡೇರಿಸ್ಲ್ಲ. ಜನರು ಮೋದಿಯವರ ಮನ್ ಕಿ ಬಾತ್ ನ್ನು ಅರ್ಥಮಾಡಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆಂದು ತಿಳಿಸಿದ್ದಾರೆ.
ನಗರ ವಾಸಿಗಳಿಗೆ ದಿನದಲ್ಲಿ 22 ಗಂಟೆಗಳ ಕಾಲ ಸಮಾಜವಾದಿ ಪಕ್ಷ ವಿದ್ಯುತ್ ನ್ನು ನೀಡುತ್ತಿದೆ. ಗ್ರಾಮಗಳಲ್ಲಿ 14-18 ಗಂಟೆಗಳ ಕಾಲ ವಿದ್ಯುತ್ ನೀಡುತ್ತಿದೆ. ಮೋದಿಯವರ ಸ್ವಕ್ಷೇತ್ರ ಕಾಶಿಯಲ್ಲಿಯೂ ನಾವು 24 ಗಂಟೆಗಳ ಕಾಲ ನಿರಂತ ವಿದ್ಯುತ್ ಸೌಲಭ್ಯವನ್ನು ನೀಡುತ್ತಿದ್ದೇವೆಂದು ತಿಳಿಸಿದ್ದಾರೆ.
ಇದೇ ವೇಳೆ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿಯವರ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಮಾಯಾವತಿಯವರ ರ್ಯಾಲಿಯಲ್ಲಿ ಅವರು ಮಾಡುವ ಭಾಷಣಗಳನ್ನು ಕೇಳಿ ಕೇಳಿ ಜನರು ರ್ಯಾಲಿಗಳಲ್ಲಿ ನಿದ್ರೆ ಮಾಡುತ್ತಾರೆ. ತಮ್ಮದೇ ಪ್ರತಿಮೆಗಳನ್ನು ರಾಜ್ಯದಲ್ಲಿ ಸ್ಥಾಪನೆ ಮಾಡಿಕೊಳ್ಳುವ ನಾಯಕಿಯ ಮೇಲೆ ಯಾರು ನಂಬಿಕೆ ಇಡುತ್ತಾರೆ. ನಮ್ಮ ಅತ್ತೆ ಬಗ್ಗೆ ಹುಷಾರಾಗಿರಿ, ಯಾವಾಗ ಬೇಕಾದರೂ ಅವರು ಬಿಜೆಪಿಯೊಂದಿಗೆ ಕೈಜೋಡಿಸಬಹುದು ಎಂದಿದ್ದಾರೆ.