ಉರಿ ಉಗ್ರ ದಾಳಿ: ದೋಷಮುಕ್ತ 2 ಯುವಕರನ್ನು ಪಾಕ್'ಗೆ ಒಪ್ಪಿಸಿದ ಭಾರತ
ವಾಘಾ: ಉರಿ ಉಗ್ರ ದಾಳಿ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿ ದೋಷ ಮುಕ್ತರಾಗಿದ್ದ ಇಬ್ಬರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಯುವಕರನ್ನು ಶನಿವಾರ ಪಾಕಿಸ್ತಾನದ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ.
2016ರ ಸೆಪ್ಟೆಂಬರ್ 18 ರಂದು ಉರಿ ಸೇನಾ ನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಉಗ್ರರಿಗೆ ಸಹಾಯ ನೀಡಿದ್ದ ಆರೋಪದಡಿಯಲ್ಲಿ ಪಾಕಿಸ್ತಾನ ಮೂಲದ ಫೈಸಲ್ ಹುಸೇನ್ ಅವಾನ್ ಹಾಗೂ ಅಹ್ಸಾನ್ ಖುರ್ಷಿದ್ ಎಂಬುವವರನ್ನು ಕಳೆದ ವರ್ಷ ಬಂಧನಕ್ಕೊಳಪಡಿಸಿತ್ತು.
ವಿಚಾರಣೆ ವೇಳೆ ವಿದ್ಯಾಭ್ಯಾಸದ ಕುರಿತು ಪೋಷಕರು ಒತ್ತಡ ಹೇರಿದ್ದರಿಂದಾಗಿ ಇಬ್ಬರು ಯುವಕರು ಭಾರತ ಗಡಿಯೊಳಗೆ ಬಂದಿದ್ದರು ಎಂದು ತಿಳಿದುಬಂದಿತ್ತು. ಪ್ರಕರಣದ ವಿಚಾರಣೆ ಬಳಿಕ ಎನ್ ಐಎ ಇಬ್ಬರನ್ನು ಸೇನೆಯ ಸುಪರ್ದಿಗೆ ಒಪ್ಪಿಸಿತ್ತು. ಇದೀಗ ಸೇನಾಧಿಕಾರಿಗಳು ಇಬ್ಬರು ಯುವಕರನ್ನು ಪಾಕಿಸ್ತಾನ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.