ಕೊಲ್ಕೋತಾ: ತೃಣಮೂಲ ಕಾಂಗ್ರೆಸ್ ನ ನಾಯಕರ ವಿರುದ್ಧ ನಡೆದಿದ್ದ ನಾರದ ಸ್ಟಿಂಗ್ ಕಾರ್ಯಾಚರಣೆ ಸಂಬಂಧ ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೆ ಕೋಲ್ಕೋತಾ ಹೈಕೋರ್ಟ್ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ನಿಶಿತಾ ಮಾತ್ರೆ ಮತ್ತು ನ್ಯಾ. ಟಿ ಚಕ್ರಬೋರ್ತಿ ಅವರನ್ನೊಳಗೊಂಡ ವಿಭಾಗೀಯ ಪೀಠ, ಸಿಬಿಐ ತನಿಖೆ ನಡೆಸುವಂತೆ ಆದೇಶಿಸಿದೆ. ಕಾರ್ಯಾಚರಣೆ ಸಂಬಂಧ ಲಭ್ಯವಿರುವ ಎಲ್ಲಾ ವಸ್ತುಗಳನ್ನು 24 ಗಂಟೆಗಳಲ್ಲಿ ವಶಕ್ಕೆ ಪಡೆದು 72 ಗಂಟೆಯೊಳಗೆ ಪ್ರಾಥಮಿಕ ತನಿಖಾ ವರದಿ ತಯಾರಿಸಿ ಕೊಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಪ್ರಾಥಮಿಕ ತನಿಖೆ ನಡೆದ ನಂತರ, ಅವಶ್ಯಕತೆ ಇದ್ದರೆ ಎಫ್ ಐ ಆರ್ ದಾಖಲಿಸುವಂತೆ ಸಿಬಿಐ ಗೆ ಕೋರ್ಟ್ ಸೂಚಿಸಿದೆ. 2016ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ವೇಳೆ, ಕೆಲ ರಾಜಕೀಯ ನಾಯಕರು ಹಣ ಪಡೆಯುತ್ತಿರುವ ದೃಶ್ಯಾವಳಿಗಳು ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.
ನಾರದ ಸ್ಟಿಂಗ್ ನಲ್ಲಿರುವ ದೃಶ್ಯಾವಳಿಗಳು ತಿರುಚಿದ್ದವು ಎಂದು ಚಂಢಿಗಡ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ವಿಭಾಗೀಯ ಪೀಠ ನೋಟ್ ಮಾಡಿದೆ.
ವಿಡಿಯೋವನ್ನು ಐ ಫೋನ್ ನಲ್ಲಿ ಸೆರೆಹಿಡಿದು, ನಂತರ ಲ್ಯಾಪ್ ಟಾಪ್ ಗೆ ವರ್ಗಾಯಿಸಿ ಆನಂತರ ಅದನ್ನು ಪೆನ್ ಡ್ರೈವ್ ಗೆ ಟ್ರಾನ್ಸ್ ಫರ್ ಮಾಡಲಾಗಿತ್ತು ಎಂದು ನಾರದ ನ್ಯೂಸ್ ಸಂಪಾದಕ ಮ್ಯಾಥ್ಯೂ ಸಾಮ್ಯುಯೆಸ್ ತಿಳಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸಲು ಸಿಬಿಐ ಸೂಕ್ತ ಎಂದು ಕೊಲ್ಕೋತಾ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ.