ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಾಮಾಜಿಕ ಜಾಲತಾಣಗಳನ್ನು ನಿರ್ವಹಣೆಗಾಗಿ ಸರ್ಕಾರದ ಬೊಕ್ಕಸದಿಂದ ಯಾವುದೇ ಖರ್ಚು ಮಾಡಲಾಗುತ್ತಿಲ್ಲ ಎಂದು ಪ್ರಧಾನಿ ಕಾರ್ಯಾಲಯ ಸ್ಪಷ್ಟನೆ ನೀಡಿದೆ.
ಆಮ್ ಆದ್ಮಿ ಪಕ್ಷದ ಮುಖಂಡ, ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಪ್ರಧಾನಿ ನರೇಂದ್ರ ಮೋದಿ ಅವರ ಸಾಮಾಜಿಕ ಜಾಲತಾಣಗಳ ನಿರ್ವಹಣೆಗಾಗಿ ಸರ್ಕಾರದ ಬೊಕ್ಕಸದಿಂದ ಖರ್ಚಾಗುತ್ತಿರುವ ಹಣವೆಷ್ಟು ಎಂದು ಆರ್ ಟಿಐ ಅರ್ಜಿಯಲ್ಲಿ ಪ್ರಶ್ನಿಸಿದ್ದರು. ಆರ್ ಟಿಐ ಅರ್ಜಿಗೆ ಉತ್ತರಿಸಿರುವ ಪ್ರಧಾನಿ ಕಾರ್ಯಾಲಯ ಸಾಮಾಜಿಕ ಜಾಲತಾಣಗಳ ನಿರ್ವಹಣೆಗಾಗಿ ಸರ್ಕಾರದ ಬೊಕ್ಕಸದಿಂದ ಹಣ ಖರ್ಚಾಗುತ್ತಿಲ್ಲ ಎಂದು ಮಾಹಿತಿ ನೀಡಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಪಿಎಂಒ ಇಂಡಿಯಾ ಆಪ್ ನ್ನು ಮೈ ಗೌರ್ನಮೆಂಟ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದು, ಬಹುಮಾನದ ಮೊತ್ತವನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಖರ್ಚುಗಳಾಗಿಲ್ಲ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.