ನವದೆಹಲಿ: ವಿಮಾನಯಾನ ಸಂಸ್ಥೆಗಳು ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ದೇಶಿ ವಿಮಾನ ಪ್ರಮಾಣಕ್ಕೆ ನಿಷೇಧ ಹೇರಿರುವ ಪ್ರಕರಣವನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬೇಕು ಎಂದು ಸೋಮವಾರ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಹೇಳಿದ್ದಾರೆ.
ಸ್ಪೀಕರ್ ಮಹಾಜನ್ ಅವರು ಗಾಯಕ್ವಾಡ್ ಅವರ ನಿಷೇಧವನ್ನು ಹಿಂಪಡೆಯಬೇಕು ಎಂದು ಪ್ರತ್ಯೇಕವಾಗಿ ಹೇಳಲಿಲ್ಲ. ಆದರೆ ಸಂಸದರು ಸಂಸತ್ ಕಾಲಪಕ್ಕೆ ಹಾಜರಾಗಬೇಕಿರುವುದರಿಂದ ಅವರು ಎಲ್ಲಾ ಸಂದರ್ಭದಲ್ಲೂ ರೈಲಿನಲ್ಲಿ ಪ್ರಯಾಣ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಸಂಸದರು ಕಲಾಪಕ್ಕೆ ಆಗಮಿಸಬೇಕಾಗಿರುವುದರಿಂದ ಯಾವಾಗ್ಲೂ ರೈಲಿನಲ್ಲಿ ಬರಲು ಆಗುವುದಿಲ್ಲ. ಕೆಲವು ಸಂದರ್ಭದಲ್ಲಿ ವಿಮಾನದ ಮೂಲಕ ಪ್ರಯಾಣ ಮಾಡಬೇಕಾಗುತ್ತದೆ. ಹೀಗಾಗಿ ಈ ಪ್ರಕರಣವನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬೇಕು ಅಂತ ನಾನು ಭಾವಿಸುತ್ತೇನೆ ಎಂದಿದ್ದಾರೆ,
ಈ ಸಂಬಂಧ ನಾನು ಆದೇಶ ಹೊರಡಿಸಲು ಸಾಧ್ಯವಿಲ್ಲ. ಆದರೆ ಪ್ರತಿಭಟನಾ ನಿರತ ಸಂಸದರು ಬಯಸಿದರೆ ಸಮಸ್ಯೆ ಪರಿಹಾರಕ್ಕೆ ನಾನು ಸಹಾಯ ಮಾಡುತ್ತೇನೆ ಎಂದು ಸುಮಿತ್ರಾ ಮಹಾಜನ್ ಅವರು ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಗಾಯಕ್ವಾಡ್ ನಿಷೇಧ ಹಿಂಪಡೆಯಬೇಕು ಎಂದು ಒತ್ತಾಯಾಸಿದ ಶಿವಸೇನಾ ಸಂಸದರು, ಈ ಹಿಂದೆ ವಿದೇಶ ಪ್ರಯಾಣದ ವೇಳೆ ವಿಮಾನ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಖ್ಯಾತ ಹಾಸ್ಯ ಕಲಾವಿದ ಕಪಿಲ್ ಶರ್ಮಾ ಅವರಿಗೆ ಏಕೆ ನಿಷೇಧ ಹೇರಲಿಲ್ಲ? ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಏರ್ ಇಂಡಿಯಾ ವಿಮಾನದ 60 ವರ್ಷದ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದ ಗಾಯಕ್ವಾಡ್ ಅವರನ್ನು ಭಾರತೀಯ ವಿಮಾನಯಾನ ಸಂಸ್ಥೆಗಳ ಒಕ್ಕೂಟ ನಿಷೇಧ ಪಟ್ಟಿಗೆ ಸೇರಿಸಿದ್ದು, ಇದನ್ನು ಕೇಂದ್ರ ಸರ್ಕಾರ ಸಹ ಬೆಂಬಲಿಸಿದೆ.