ದೇಶ

ಸಚಿವ ರವಿಶಂಕರ್ ಪ್ರಸಾದ್ ಗೆ ಸಾಕ್ಷಿ ಸಿಂಗ್ ಟ್ವೀಟ್: ಕಪ್ಪುಪಟ್ಟಿಗೆ ಆಧಾರ್ ಸಂಸ್ಥೆ

Sumana Upadhyaya
ನವದೆಹಲಿ: ಆಧಾರ್ ಕಾರ್ಡು ನೋಂದಣಿ ಕೇಂದ್ರದಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯವರು ಆಧಾರ್ ಗೆ ಅರ್ಜಿ ಹಾಕಿ ಕಾರ್ಡು ಮಾಡಿಸಿಕೊಂಡದ್ದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದ ಸಂಸ್ಥೆಯನ್ನು 10 ವರ್ಷಗಳವರೆಗೆ ಕಪ್ಪು ಪಟ್ಟಿಗೆ ಸೇರಿಸಲಾಗಿದೆ.
ಈ ಬಗ್ಗೆ ಧೋನಿಯವರ ಪತ್ನಿ ಸಾಕ್ಷಿ ಸಿಂಗ್ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರ ಗಮನಕ್ಕೆ ತಂದಿದ್ದರು. 
ಅನೇಕ ಸಂಸ್ಥೆಗಳಲ್ಲಿ ಒಂದಾದ ಕಾಮನ್ ಸರ್ವಿಸ್ ಸೆಂಟರ್(ಸಿಎಸ್ ಸಿ) ಆಧಾರ್ ಕಾರ್ಡುಗಳನ್ನು ಜಾರಿಗೊಳಿಸುವ ಕಾರ್ಯ ನಡೆಸುತ್ತಿದ್ದು, ಅಲ್ಲಿಗೆ ಧೋನಿಯವರು ಆಧಾರ್ ಕಾರ್ಡು ಮಾಡಿಸಿಕೊಳ್ಳಲು ಹೋಗಿದ್ದರು. ಸಂಸ್ಥೆಯ ನೌಕರರ ಮೂಲಕ ಆಧಾರ್ ಕಾರ್ಡು ಮಾಡಿಸಿಕೊಳ್ಳುವ ಚಿತ್ರ, ಅವರ ಅರ್ಜಿಯ ಫೋಟೋಗಳನ್ನು ಹಾಕಿ ಸಂಸ್ಥೆಯ ಟ್ವಿಟ್ಟರ್ ಪುಟದಲ್ಲಿ ಪೋಸ್ಟ್ ಮಾಡಲಾಗಿತ್ತು. 
ಇದನ್ನು ಮಾಹಿತಿ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅದನ್ನು ರಿಟ್ವೀಟ್ ಮಾಡಿದ್ದರು. ಇದನ್ನು ಗಮನಿಸಿದ ಧೋನಿಯವರ ಪತ್ನಿ ಸಾಕ್ಷಿ ಸಿಂಗ್, ಆಧಾರ್ ಕಾರ್ಡಿನ ಅರ್ಜಿಯಲ್ಲಿ ಖಾಸಗಿ ವಿವರಗಳಿವೆ. ಈ ಮಾಹಿತಿಯನ್ನು ಕೂಡ ಬಹಿರಂಗಪಡಿಸಿದರೆ ಖಾಸಗಿತನ ಏನು ಉಳಿಯುತ್ತದೆ. ಕಾನೂನು ಪ್ರಕಾರ ತಪ್ಪಲ್ಲವೇ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದರು. 
ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ರವಿಶಂಕರ್ ಪ್ರಸಾದ್, ತಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು ಎಂದು ಹೇಳಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಅದರಂತೆ ಸಂಸ್ಥೆ ಹಾಗೂ ಆ ಫೋಟೋ ಹಾಕಿದ ಸಂಸ್ಥೆಯ ಕಾರ್ಯಕರ್ತನನ್ನು 10 ವರ್ಷಗಳವರೆಗೆ ಕಪ್ಪುಪಟ್ಟಿಗೆ ಸೇರಿಸಲಾಗಿದೆ.
SCROLL FOR NEXT