ಎಲ್ಲಿ ಹೋಯಿತು '1ಕ್ಕೆ ಬದಲು 10 ಪಾಕ್ ಸೈನಿಕರ ರುಂಡ'ಗಳ ಭರವಸೆ: ಕೇಂದ್ರಕ್ಕೆ ಹುತಾತ್ಮ ಯೋಧನ ತಾಯಿ ಪ್ರಶ್ನೆ
ಒಬ್ಬ ಯೋಧನ ರುಂಡಕ್ಕೆ ಪ್ರತಿಯಾಗಿ 10 ಪಾಕಿಸ್ತಾನ ಸೈನಿಕರ ರುಂಡವನ್ನು ಕಡಿದು ತರುತ್ತೇವೆಂಬ ಕೇಂದ್ರ ಸರ್ಕಾರದ ಭರವಸೆ ಎಲ್ಲಿ ಹೋಯಿತು ಎಂದು ಹುತಾತ್ಮ ಯೋಧ ಲ್ಯಾನ್ಸ್ ನಾಯ್ಕ್ ಹೇಮ್ರಾಜ್ ಅವರ ತಾಯಿ ಮಂಗಳವಾರ...
ಶ್ರೀನಗರ: ಒಬ್ಬ ಯೋಧನ ರುಂಡಕ್ಕೆ ಪ್ರತಿಯಾಗಿ 10 ಪಾಕಿಸ್ತಾನ ಸೈನಿಕರ ರುಂಡವನ್ನು ಕಡಿದು ತರುತ್ತೇವೆಂಬ ಕೇಂದ್ರ ಸರ್ಕಾರದ ಭರವಸೆ ಎಲ್ಲಿ ಹೋಯಿತು ಎಂದು ಹುತಾತ್ಮ ಯೋಧ ಲ್ಯಾನ್ಸ್ ನಾಯ್ಕ್ ಹೇಮ್ರಾಜ್ ಅವರ ತಾಯಿ ಮಂಗಳವಾರ ಪ್ರಶ್ನಿಸಿದ್ದಾರೆ.
ನಿನ್ನೆಯಷ್ಟೇ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದ ಪಾಕಿಸ್ತಾನ, ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಇಬ್ಬರು ಯೋಧರ ಶಿರಚ್ಛೇದನ ಮಾಡುವ ಮೂಲಕ ಪೈಶಾಚಿಕ ಕೃತ್ಯವೆಸಗಿತ್ತು. ಪಾಕಿಸ್ತಾನದ ಈ ವರ್ತನೆಗೆ ಇಡೀ ದೇಶದಾದ್ಯಂತ ತೀವ್ರ ಆಕ್ರೋಶಗಳು ವ್ಯಕ್ತವಾಗತೊಡಗಿವೆ.
2013 ರಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಕರ್ತವ್ಯ ನಿರತರಾಗಿದ್ದ ಲ್ಯಾನ್ಸ್ ನಾಯ್ಕ್ ಹೇಮ್ರಾಜ್ ಅವರ ಮೇಲೆ ದಾಳಿ ಮಾಡಿದ್ದ ಪಾಕಿಸ್ತಾನ ಸೈನಿಕರು, ಶಿರಚ್ಛೇದ ಮಾಡಿದ್ದರು.
ಇದೀಗ ಮತ್ತದೇ ಘಟನೆ ಮರುಕಳಿಸಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಹುತಾತ್ಮ ಯೋಧ ಹೇಮ್ರಾಜ್ ಅವರ ತಾಯಿ ಒಬ್ಬ ಯೋಧನ ರುಂಡಕ್ಕೆ ಪ್ರತಿಯಾಗಿ 10 ಪಾಕಿಸ್ತಾನ ಸೈನಿಕರ ರುಂಡವನ್ನು ಕಡಿದು ತರುತ್ತೇವೆಂದು ಕೇಂದ್ರ ಸರ್ಕಾರ ಹೇಳಿತ್ತು. ಎಲ್ಲಿ ಹೋಯಿತು 10 ಪಾಕಿಸ್ತಾನ ಸೈನಿಕರ ರುಂಡ ಎಂದು ಪ್ರಶ್ನಿಸಿದ್ದಾರೆ.
ಪಾಕಿಸ್ತಾನದವರು ನನ್ನ ಮಗನ ಶಿರಚ್ಛೇದ ಮಾಡಿದ್ದರು. ಪ್ರತೀನಿತ್ಯ ನಮ್ಮ ಸೈನಿಕರು ಬಲಿಯಾಗುತ್ತಿದ್ದಾರೆ. ನಮ್ಮ ಒಬ್ಬ ಯೋಧನ ರುಂಡ ಕಡಿದರೆ, ನಾವು 10 ಪಾಕಿಸ್ತಾನ ಯೋಧ ರುಂಡ ಕಡಿದು ತರುತ್ತೇವೆಂದು ಸರ್ಕಾರ ಭರವಸೆ ನೀಡಿದ್ದು. ಈಗಲೂ ಸರ್ಕಾರ ಭರವಸೆಯನ್ನು ಈಡೇರಿಸಿಲ್ಲ. ಪಾಕಿಸ್ತಾನದ ವಿರುದ್ಧ ಈಗಲಾದರೂ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಒಂದು ಮಗುವನ್ನು ಕಳೆದುಕೊಂಡಾಗ ಎಷ್ಟು ನೋವಿರುತ್ತದೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ. ಪಾಕಿಸ್ತಾನದ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಹುತಾತ್ಮ ಯೋಧನ ಕುಟುಂಬಕ್ಕೆ ನೀಡಿದ್ದ ಯಾವುದೇ ಭರವಸೆಯನ್ನೂ ಸರ್ಕಾರ ಈಡೇರಿಸಿಲ್ಲ ಎಂದು ತಿಳಿಸಿದ್ದಾರೆ.
ಹೇಮ್ರಾಜ್ ಅವರ ಸಹೋದರ ಮಾತನಾಡಿ. ಇಂತಹ ಪರಿಸ್ಥಿತಿಗಳನ್ನು ನೋಡಿದರೆ ಬಹಳ ನೋವಾಗುತ್ತದೆ. ಗಡಿಯಲ್ಲಿ ನಮ್ಮ ಯೋಧರು ಹುತಾತ್ಮರಾಗುತ್ತಿರುವ ರೀತಿ ನೋಡಿದರೆ ಬಹಳ ನೋವಾಗುತ್ತದೆ. ಇಷ್ಟೆಲ್ಲಾ ಆಗುತ್ತಿದ್ದರೂ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪಾಕಿಸ್ತಾನದ ಈ ಕೃತ್ಯಗಳ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಭವಿಷ್ಯದಲ್ಲಿ ಮುಂದೆಂದೂ ಅವರು ಈ ರೀತಿಯ ಕೃತ್ಯಕ್ಕೆ ಕೈಹಾಕದಂತೆ ಮಾಡಬೇಕು ಎಂದಿದ್ದಾರೆ.
ಮೋದಿ ಸರ್ಕಾರ ಅಡಿಯಲ್ಲಿ ಪ್ರತೀನಿತ್ಯ ಒಬ್ಬರಲ್ಲಿ ಒಬ್ಬ ಯೋಧ ಹುತಾತ್ಮನಾಗುತ್ತಿದ್ದಾನೆ. ಜನರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಅವರ ಬಳಿ ಯಾವುದೇ ತಂತ್ರಗಳಿಲ್ಲ ಎಂದು ತಿಳಿಸಿದ್ದಾರೆ.