ಬಿಜೆಪಿ ಶಾಸಕನಿಂದ ಧಮ್ಕಿ: ಮಹಿಳಾ ಐಪಿಎಸ್ ಅಧಿಕಾರಿ ಕಣ್ಣೀರು: ವಿಡಿಯೋ ವೈರಲ್
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಪಾರ್ಲಿಮೆಂಟರಿ ಕ್ಷೇತ್ರ ಗೋರಖ್ ಪುರದಲ್ಲಿ ಬಿಜೆಪಿ ಶಾಸಕ ಹಾಕಿದ ಧಮ್ಕಿಗೆ ಬೆದರಿದ ಮಹಿಳಾ ಐಪಿಎಸ್ ...
ಗೋರಖ್ ಪುರ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಪಾರ್ಲಿಮೆಂಟರಿ ಕ್ಷೇತ್ರ ಗೋರಖ್ ಪುರದಲ್ಲಿ ಬಿಜೆಪಿ ಶಾಸಕ ಹಾಕಿದ ಧಮ್ಕಿಗೆ ಬೆದರಿದ ಮಹಿಳಾ ಐಪಿಎಸ್ ಅಧಿಕಾರಿಣಿ ರಸ್ತೆಯಲ್ಲೇ ಕಣ್ಣೀರು ಹಾಕಿದ್ದು, ವಿಡಿಯೋ ವೈರಲ್ ಆಗಿದೆ.
ಕೊಯಿಲ್ವಾ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ಗುಂಪೊಂದು ರಸ್ತೆ ಬಂದ್ ಮಾಡಿತ್ತು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿತ್ತು. ಈ ವಾಗ್ವಾದದ ಮಧ್ಯೆ ಯಾರೋ ಪೊಲೀಸರ ಮೇಲೆ ಕಲ್ಲು ತೂರಿದ್ದು ಪರಿಸ್ಥಿತಿ ತಹಬದಿಗೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಮಹಿಳೆಯೊಬ್ಬರಿಗೆ ಹೊಡೆದಿದ್ದು, 80 ವರ್ಷದ ವ್ಯಕ್ತಿಯನ್ನು ಎಳೆದಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ ಸ್ಥಳಕ್ಕೆ ಧಾವಿಸಿದ ಬಿಜೆಪಿ ಶಾಸಕ, ರಾಧಾ ಮೋಹನ್ ದಾಸ್ ಅಗರವಾಲ್ ಪೊಲೀಸರ ಕ್ರಮ ಖಂಡಿಸಿದ್ದಾರೆ. ಮಹಿಳಾ ಐಪಿಎಸ್ ಅಧಿಕಾರಿ ಚಾರು ನಿಗಮ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಮಜಾಯಿಷಿ ನೀಡಲು ಹೋದ ಚಾರು ನಿಗಮ್ ಅವರನ್ನು ಗದರಿದಿದ್ದಾರೆ. ಬಾಯಿ ಮುಚ್ಚಿಕೊಂಡಿರಿ, ಏನೂ ಹೇಳಲು ಬರಬೇಡಿ. ನಿಮ್ಮ ಇತಿ ಮಿತಿ ಮೀರಬೇಡಿ ಎಂದು ಬೆರಳು ತೋರುತ್ತಾ ಮಹಿಳಾ ಐಪಿಎಸ್ ಅಧಿಕಾರಿ ಚಾರು ನಿಗಮ್ ಅವರನ್ನು ಗದರಿದ್ದಾರೆ. ಈ ವೇಳೆ ಶಾಸಕರಿಗೆ ಉತ್ತರ ನೀಡುತ್ತಾ ಅಕ್ಷರಶಃ ಅತ್ತಿದ್ದಾರೆ. ಕರ್ಚೀಫ್ ತೆಗೆದುಕೊಂಡು ಕಣ್ಣೀರು ಒರೆಸಿಕೊಂಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.